ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ವೈದ್ಯರುಗಳಿಗೆ ಕರೆ ನೀಡಿದರು.
ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಪಾಲಿಸುವುದು ಅತ್ಯಂತ ಅವಶ್ಯಕ. ರೋಗಿಯ ಪ್ರಾಣ ಉಳಿಸಿದರೆ ವೈದ್ಯರೇ ದೇವರಾಗುತ್ತಾರೆ. ತಮ್ಮ ವೃತ್ತಿಯಲ್ಲಿ ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ತೋರಬಾರದು. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅನಾಹುತವಾಗುತ್ತದೆ ಎಂಬ ಎಚ್ಚರವಿರಬೇಕು. ಇದು ದೇವರ ಕೆಲಸ ಎಂದು ಮಾಡಿದರೆ ಸಮಾಜದಲ್ಲಿ ರೋಗಗಳನ್ನು ತಡೆಗಟ್ಟಿ, ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೈದ್ಯೋ ನಾರಾಯಣೋ ಹರಿ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ರಕ್ಷಣೆ ಮಾಡುವವರು ವೈದ್ಯರು ಎಂದರು. ಕೊರೊನಾ ಸಂದರ್ಭದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ತಮ್ಮ ಜೀವದ ಹಂಗನ್ನು ತೊರೆದು ವೈದ್ಯರು ದುಡಿದಿದ್ದಾರೆ ಎಂದು ವೈದ್ಯರ ಸೇವೆಗಳನ್ನು ಹಾಡಿ ಹೊಗಳಿದರು.
ಕಾರ್ಯಕ್ರಮದಲ್ಲಿ ಜೀವನ ಸಾಧನೆ ಹಾಗೂ ಇತರೆ ಪ್ರಶಸ್ತಿಗಳಿಗೆ ಭಾಜನರಾದ ವೈದ್ಯರನ್ನು ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಸೇರಿದಂತೆ ವೈದ್ಯರ ಸಂಘದ ಅಧ್ಯಕ್ಷರುಗಳು ಭಾಗಿಯಾಗಿದ್ದರು.