ಬೆಂಗಳೂರು: ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯ ಎಸಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಮೇಲಿನ ತನಿಖೆಗಾಗಿ ರಾಜ್ಯಪಾಲರು ಅನುಮತಿ ನೀಡಲು ಲೋಕಾಯುಕ್ತದವರು ಮನವಿ ಮಾಡಿದ್ದಾರೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ನಲ್ಲಿ ನಡೆದ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದವರು 23-11-2023ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ, ಲೋಕಾಯುಕ್ತ ಮತ್ತೊಮ್ಮೆ ಕೋರಿದ್ದಾರೆ. ಆದರೂ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ.
ಆದರೆ 26-07-2024ರಂದು ಅಬ್ರಾಹಂ ಅವರು ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇಂತಹ ತಾರತಮ್ಯ ಏಕೆ ನಡೆಯಬೇಕು ಎಂದು ಪ್ರಶ್ನಿಸಿದರು.
ನಮಗೆ ರಾಜ್ಯಪಾಲರ ಮೇಲೆ ಗೌರವವಿದೆ. ಆದರೆ ಶಶಿಕಲಾ ಜೊಲ್ಲೆ, ಎಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಮೇಲೂ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಯಾಕೆ ಆದೇಶ ನೀಡಿಲ್ಲ. ಆದ್ದರಿಂದ ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.