ವಿಜಯಪುರ: ಪ್ರಧಾನಿ ಮೋದಿ ಅವರ ಜನಪರ ಆಡಳಿತದಿಂದಾಗಿ ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಜಯಪುರದಲ್ಲಿ ಇಂದು(ಫೆಬ್ರವರಿ.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಉಚಿತ ಯೋಜನೆ, ಸುಳ್ಳು ಆಶ್ವಾಸನೆಗಳ ಮೂಲಕ ಬಡ ಜನರ ವೋಟುಗಳಿಸಿ, ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಮತದಾರರು ಮತಗಳನ್ನು ನೀಡದೆ ಹೀನಾಯ ಸೋಲು ಉಣ್ಣಿಸಿದ್ದಾರೆ ಎಂದು ಕಿಡಿಕಾರಿದರು.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಎಎಪಿ ಪಕ್ಷ ದೆಹಲಿಯಲ್ಲಿ ದುರಾಡಳಿತ ನಡೆಸಿದ್ದರು. ಅಲ್ಲದೇ ಅವರು ಮುಖ್ಯಮಂತ್ರಿಯಾಗಿದ್ದ ಜೈಲಿಗೆ ಹೋದರೂ ಲಜ್ಜೆಗೆಟ್ಟು ಆಡಳಿತ ನಡೆಸಿದ್ದ ಸಂವಿಧಾನ ದ್ರೋಹಿಯಾಗಿದ್ದಾರೆ. ದೆಹಲಿ ಒಂದು ಬೃಹತ್ ಮಹಾನಗರ ಪಾಲಿಕೆ ಆಡಳಿತ ಇದ್ದಂತೆ. ಬೇರೆ ರಾಜ್ಯಗಳಿಗೆ ಇರುವಂತೆ ಅಧಿಕ ಜವಾಬ್ದಾರಿ ಇಲ್ಲದಿರುವ ಸರ್ಕಾರವಾಗಿತ್ತು. ಇನ್ನೂ ಅತೀ ಹೆಚ್ಚು ಆದಾಯ ಸಂಗ್ರಹವಾಗುವ ಸ್ಥಳವಾಗಿದ್ದು, ಸರ್ಕಾರದ ಖಜಾನೆಯನ್ನು ಲೂಟಿ ಹೊಡೆದ ದೇಶ ಕಂಡ ಹೀನಮನಸ್ಸಿನ ರಾಜಕಾರಣಿಯಾಗಿದ್ದರು ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ದೇಶದಲ್ಲಿ ಎಎಪಿ ಪಕ್ಷದವರು ಕೆಟ್ಟ ಚುನಾವಣಾ ಮಾದರಿಯನ್ನು ಹಾಕಿ, ಉಚಿತ ಯೋಜನೆಗಳ ಮೂಲಕ ದೆಹಲಿ ಮತ್ತು ಪಂಜಾಬ್‌ನಲ್ಲಿ ಗೆಲುವು ಸಾಧಿಸಿದ್ದರು. ಆದರೆ ಇಂದು ಪ್ರಧಾನಿ ಮೋದಿಯವರ ಜನಾಡಳಿತವನ್ನು ಒಪ್ಪಿ ಜನರು ತಮ್ಮ ಮತಗಳನ್ನು ಬಿಜೆಪಿಗೆ ನೀಡಿದ್ದಾರೆ. ಹೀಗಾಗಿ ಚುನಾವಣೆ ಗೆಲುವಿಗೆ ಕಾರಣವಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.