ಬೆಂಗಳೂರು: ಕರ್ನಾಟಕ ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು.
ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಕಳೆದ 19 ತಿಂಗಳಿನಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಕೂಡ ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವರ್ಷಕ್ಕೆ 90,000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಅಭಿವೃದ್ಧಿ ವೇಗ ಸದೃಢಗೊಳಿಸಿದೆ. ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಹಾಲಿನ ಉತ್ಪಾದನೆಯಲ್ಲಿ ರಾಜ್ಯ ದಾಖಲೆ ಬರೆದಿದೆ. ದಿನಕ್ಕೆ ಕೆಎಂಎಫ್ 1 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದು, ಇದುವರೆಗೆ ಪಶು ಪಾಲಕರಿಗೆ 1500 ಕೋಟಿ ಪ್ರೋತ್ಸಾಹ ಧನ ನೀಡಿದೆ. ಈ ಮೂಲಕ ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ ಎಂದು ಶ್ಲಾಘಿಸಿದರು.





