ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ ಮಾತಿನ ಯುದ್ಧವೇ ನಡೆದು ಹೋಯಿತು.
ನಿನ್ನೆಯಷ್ಟೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ಓದದೇ ತಾವೇ ಸಿದ್ಧಪಡಿಸಿದ್ದ ಮೂರು ಸಾಲಿನ ಭಾಷಣ ಓದಿ ತೆರಳಿದರು.
ಈ ವೇಳೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಸದನ ಬಿಟ್ಟು ಹೋಗದಂತೆ ತಡೆದರು. ಈ ವೇಳೆ ಬಿ.ಕೆ.ಹರಿಪ್ರಸಾದ್ ಅವರ ಬಟ್ಟೆ ಹರಿದುಹೋಯಿತು.
ಈ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬಿ.ಕೆ.ಹರಿಪ್ರಸಾದ್ ಬಿಜೆಪಿ ನಾಯಕರ ವಿರುದ್ಧವೇ ಹರಿಹಾಯ್ದರಲ್ಲದೇ ಅವರೇ ನನ್ನ ಬಟ್ಟೆ ಹರಿದು ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಈ ಬಗ್ಗೆ ಇಂದು ಸದನದಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ವಿಪಕ್ಷ ನಾಯಕ ಆರ್.ಅಶೋಕ್ ಅವರು, ಇಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಬೇಕು. ಆಗ ಮಾತ್ರ ಬಿ.ಕೆ.ಹರಿಪ್ರಸಾದ್ ಬಟ್ಟೆ ಹರಿದು ಹಾಕಿದವರು ಯಾರು ಎಂದು ಗೊತ್ತಾಗುತ್ತದೆ. ಸುಖಾ ಸುಮ್ಮನೆ ನಮ್ಮ ನಾಯಕರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.





