ಬೆಂಗಳೂರು : ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವ ಲಕ್ಷಣಗಳು ಗೋಚರಿಸಿದ್ದು, ನಾಳೆಯಿಂದ ನಡೆಯುವ ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಇಂದು(ಜ.21) ಸಂಜೆ 5 :45ಕ್ಕೆ ಲೋಕಭವನಕ್ಕೆ ಭೇಟಿ ನೀಡಿ, ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದೆ. ನಾಳೆಯಿಂದ ಜ.31ರವರೆಗೆ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದ್ದು ರಾಜ್ಯಪಾಲರ ನಡೆ ಬಹಳ ಕುತೂಹಲ ಮೂಡಿಸಿದೆ.
ಕೇಂದ್ರ ಸರ್ಕಾರವು ನರೇಗಾ ಹೆಸರನ್ನು ರದ್ದುಗೊಳಿಸುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ಘರ್ಷಣೆ ತರಕಕ್ಕೇರುವ ನಿರೀಕ್ಷೆ ಇದೆ.
ಈಗ ಕೇಂದ್ರ ಸರ್ಕಾರ ಕಳೆದ ಸಂಸತ್‍ನ ಚಳಿಗಾಲದ ಅಧಿವೇಶನದಲ್ಲಿ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನ್ರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿದೆ. ಕೇಂದ್ರ ಸರ್ಕಾರದ ಉದ್ದೇಶಿತ ಈ ತಿದ್ದುಪಡಿಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿ ರಾಷ್ಟ್ರಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದೆ. ಅದರಲ್ಲೂ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿದ್ದು, ಇದಕ್ಕಾಗಿಯೇ ಚರ್ಚಿಸಲು ಎರಡು ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಖಂಡಿಸಿ, ಇದರಿಂದ ಜನರ ಮೇಲಾಗುವ ದುಷ್ಪರಿಣಾಮ, ಅನನುಕೂಲತೆ ಬಗ್ಗೆ ಸರ್ಕಾರ ಭಾಷಣದಲ್ಲಿ ಸೇರ್ಪಡೆ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ರಾಜ್ಯಪಾಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಉದ್ದೇಶಿತ ವಿಬಿ ಜಿ ರಾಮ್ ಜಿ ತಿದ್ದುಪಡಿಗೆ ಖಂಡನಾ ನಿರ್ಣಯ ಪದ ಸೇರ್ಪಡೆಯಾದರೆ ಓದುವುದಿಲ್ಲ ಎಂದು ಮೌಖಿಕವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಸಾಮಾನ್ಯವಾಗಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳು, ಇದರಿಂದ ಜನರಿಗೆ ಆಗಿರುವ ಅನುಕೂಲ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣವನ್ನು ಸಾಮಾನ್ಯವಾಗಿ ರಾಜ್ಯಪಾಲರು ಓದುವುದು ಶಿಷ್ಟಾಚಾರ. ಅದರಲ್ಲಿ ಏನಾದರೂ ಅಪ್ಪಿತಪ್ಪಿ ಕೆಲವು ವಿವಾದಾತ್ಮಕ ಅಂಶಗಳಿದ್ದರೆ ಮಾತ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಜೊತೆ ಲೋಕಭವನದ ಅಧಿಕಾರಿಗಳು ಚರ್ಚಿಸಿ ವಿವರಣೆ ಪಡೆಯುತ್ತಾರೆ. ನಿಯಮಗಳ ಪ್ರಕಾರ ರಾಜ್ಯಪಾಲರು ಸರ್ಕಾರದ ಭಾಷಣವನ್ನೇ ಯಥಾವತ್ತಾಗಿ ಓದಬೇಕೆಂಬ ನಿಯಮವಿಲ್ಲ. ರಾಜ್ಯಪಾಲರಿಗೆ ಯಾವುದಾದರೂ ವಿಷಯದ ಬಗ್ಗೆ ಸಂದೇಹ ಅಥವಾ ವಿವಾದಾತ್ಮಕ ಅಂಶಗಳಿದ್ದರೆ ಅದನ್ನು ತೆಗೆದು ಹಾಕಲು ಸರ್ಕಾರಕ್ಕೆ ಸೂಚನೆಯನ್ನು ಕೊಡಬಹುದು. ಇಲ್ಲದಿದ್ದರೆ ಆ ಭಾಷಣದ ಪುಟವನ್ನು ಓದಬಹುದು ಇಲ್ಲವೇ ಓದದೇ ಇರಬಹುದು. ಅದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ತೀರ್ಮಾನ. ಹೀಗೆ ಓದಬೇಕೆಂದು ಅವರ ಮೇಲೆ ಒತ್ತಡ ಹೇರುವಂತಿಲ್ಲ.
ಒಂದು ವೇಳೆ ಸರ್ಕಾರ ಸಿದ್ಧಪಡಿಸಿರುವ ಈ ಭಾಷಣದ ಅಂಶವನ್ನು ತೆಗೆದು ಹಾಕದಿದ್ದರೆ ಆ ಪುಟವನ್ನೇ ತಾವು ಓದುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಅ?ಕಾರಿಗಳ ಮೂಲಕ ತಿಳಿಸಿರುವುದಾಗಿ ತಿಳಿದುಬಂದಿದೆ. ಹಾಗೊಂದು ವೇಳೆ ಸರ್ಕಾರ ರಾಜ್ಯಪಾಲರ ಸೂಚನೆಯನ್ನು ಮೀರಿ ಯಥಾವತ್ತಾಗಿ ಭಾಷಣದ ಪ್ರತಿ ನೀಡಿದರೆ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರ ಏನೆಂಬುದು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ತಮಿಳುನಾಡಿನಲ್ಲಿ ಮೊದಲು ನಾಡಗೀತೆ ಹಾಡಿದ ನಂತರ ರಾಷ್ಟ್ರಗೀತೆಗೆ ಅಪಮಾನ ಮಾಡಲಾಗಿದೆ ಎಂದು ಅಲ್ಲಿನ ರಾಜ್ಯಪಾಲರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸದನದಿಂದ ಹೊರ ನಡೆದಿದ್ದರು.
ಈಗ ಥಾವರ್ ಚಂದ್ ಗೆಹ್ಲೋಟ್ ಕೇಂದ್ರ ಸರ್ಕಾರದ ವಿರುದ್ಧವಾಗಿ ಖಂಡನಾ ನಿರ್ಣಯದ ಅಂಶವನ್ನು ಉಲ್ಲೇಖ ಮಾಡಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಸಿದ್ದಪಡಿಸಿರುವ ಭಾಷಣದಲ್ಲಿ ವಿಬಿ ಜಿ ರಾಮ್ ಜಿ ವಿರುದ್ಧದ ಅಂಶಗಳು ಇರಲಿವೆ ಎಂಬ ಮಾಹಿತಿ ಇದೆ. ಮನ್ರೇಗಾವನ್ನು ರದ್ದುಪಡಿಸಿದ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಜನರು ಯಾವ ರೀತಿಯ ಸಮಸ್ಯೆ ಅನುಭವಿಸಲಿದ್ದಾರೆ ಎಂಬ ಅಂಶಗಳೂ ಉಲ್ಲೇಖ ಆಗಿರುವ ಸಾಧ್ಯತೆ ಇದೆ. ಜೊತೆಗೆ ಒಕ್ಕೂಟ ಸರ್ಕಾರಕ್ಕೆ ಕೇಂದ್ರದ ನಡೆ ಯಾವ ರೀತಿಯಲ್ಲಿ ಪೂರಕವಾಗಿಲ್ಲ ಎಂಬ ಅಂಶಗಳು ಭಾಷಣದಲ್ಲಿ ವ್ಯಕ್ತವಾಗುವ ಸಾಧ್ಯತೆ ದಟ್ಟವಾಗಿದೆ.
ಗೆಹ್ಲೋಟ್ ಅವರು ಕೇರಳ ಮತ್ತು ತಮಿಳುನಾಡು ರಾಜ್ಯಪಾಲರ ಹೆಜ್ಜೆಯನ್ನೇ ಇಡುತ್ತಾರಾ ಅಥವಾ ಸರ್ಕಾರದ ಭಾಷಣವನ್ನು ಪೂರ್ತಿಯಾಗಿ ಓದುವ ಮೂಲಕ ವಿವಾದಕ್ಕೆ ಅವಕಾಶ ನೀಡದೆ ಇರುತ್ತಾರಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ.





