ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಉಸ್ತುವಾರಿಗೆ ನೇಮಿಸಿರುವ ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಸದಸ್ಯರಿಗೆ ಸರ್ಕಾರದ, ಸಾರ್ವಜನಿಕರ ಹಣವನ್ನು ಸಂಬಳವಾಗಿ ನೀಡುತ್ತಿರುವುದರ ವಿರುದ್ಧ ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಶಾಸಕ ಎಚ್.ಎಂ ರೇವಣ್ಣ ಅವರ ನೇತೃತ್ವದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ.
ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ಪ್ರಸ್ತಾಪಿಸಿ ಕಾಂಗ್ರೆಸ್ ಸಂಬಳ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಶಾಸಕ ಸುನೀಲ್ ಕುಮಾರ್ ಕೂಡ ಧ್ವನಿಗೂಡಿಸಿದರು.
ಈ ವೇಳೆ ಸದನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಡಿಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ, ಕಾಂಗ್ರೆಸ್‌ಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಸಾರ್ವಜನಿಕರ ದುಡ್ಡನ್ನು ತೆಗೆದುಕೊಂಡು ಅಲ್ಲಿಗೆ ಹಂಚೋದು ಸರಿಯಲ್ಲ. ಬೇಕಾದರೆ ಭಿಕ್ಷೆ ಬೇಡಿ ಅವರಿಗೆ ದುಡ್ಡು ಕೊಡಲಿ ಎಂದು ಕಿಡಿಕಾರಿದರು.
ಯಾವ ಆಧಾರದ ಮೇಲೆ ನೇಮಕಾತಿ ಮಾಡ್ತೀರಾ? ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇಲ್ಲಿವರೆಗೂ ಯಾವ ಮುಖ್ಯಮಂತ್ರಿಯೂ, ಅಧ್ಯಕ್ಷರು ಈ ಕೆಲಸ ಮಾಡಿರಲಿಲ್ಲ. ಮನೆಹಾಳು ಕೆಲಸ ಮಾಡುತ್ತಿರುವುದು ಇವರು ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, 52 ಸಾವಿರ ಕೋಟಿ ಯೋಜನೆಗಳನ್ನು ನಿರ್ವಹಣೆ ಮಾಡುವುದು ಸುಲಭವಲ್ಲ ಹೀಗಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.





