Mysore
22
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು: ಸಿದ್ದರಾಮಯ್ಯ

ಬೆಂಗಳೂರು: ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಮತ್ತು ಹಣ ಒದಗಿಸಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಘೋಷಿಸಿದರು.

ಮಂಗಳವಾರ (ಆ.27) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನೂತನ ತಾಯಿ-ಮಕ್ಕಳ ಆಸ್ಪತ್ರೆ, ಬೋಧನಾ ಕಟ್ಟಡ, ಶವಾಗಾರ ಕಟ್ಟಡ, ನೂತನ ಮಾದರಿ ಅಡುಗೆ ಮನೆ, ಲಾಂಡ್ರಿ ಕಟ್ಟಡ, ವೈದ್ಯಕೀಯ ಘನ ತ್ಯಾಜ್ಯ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲೇ ಜಯದೇವ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ದಿನದ 24 ಗಂಟೆ ಜಯದೇವದಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆ ಒದಗಿಸಬೇಕು. ಇದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಕೊಳ್ಳಿ ಎನ್ನುವ ಸೂಚನೆ ನೀಡಿದರು.

ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು ಎನ್ನುವುದು ಸರ್ಕಾರದ ಗುರಿ ಎಂದು ನುಡಿದರು.

ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟ ಮತ್ತು ಶುಚಿತ್ವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಬರಬೇಕು. ಆಗ ಮಾತ್ರ ಸರ್ಕಾರ ಕೊಡುವ ಅನುದಾನಕ್ಕೆ ಅರ್ಥ ಬರುತ್ತದೆ ಎಂದರು.

ನಾನು ಸೇರಿ ಮಂತ್ರಿಗಳು, ರಾಜರಣಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಉಪ ಇದರಲ್ಲಿ ನಮ್ಮಗಳ ತಪ್ಪು ಕೂಡ ಇದೆ. ಆದರೆ ಖಾಸಗಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಶುಚಿತ್ವ ಸರ್ಕಾರಿ ಆಸ್ಪತ್ರೆಗಳಲ್ಲೂ ಇರುವಂತೆ ನೋಡಿಕೊಳ್ಳಲು ಅಗತ್ಯ ಅನುದಾನ ಕೊಡುತ್ತಲೇ ಇದ್ದೇವೆ. ಆಸ್ಪತ್ರೆಯ ಆಡಳಿತ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಸೇವೆ ಸಲ್ಲಿಸಿದರೆ ಇದು ಸಾಧ್ಯವಿದೆ ಎಂದರು.

ಅಪಘಾತ ವಲಯಗಳ ಹತ್ತಿರದಲ್ಲೇ ಟ್ರಾಮಾ ಸೆಂಟರ್ ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಗಾಯಾಳುಗಳ ಜೀವ ಉಳಿಸಲು ಗೋಲ್ಡನ್ ಹವರ್ ಬಹಳ ಮುಖ್ಯ ಎನ್ನುವುದನ್ನು ಪರಿಗಣಿಸಿ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.

ನಾನು ಬಜೆಟ್ ನಲ್ಲಿ ಹೇಳಿದ್ದನ್ನು ಜಾರಿ ಮಾಡಿ: ಬಜೆಟ್ ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಜವಾಬ್ದಾರಿಯಿಂದ ಜಾರಿ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ವೇದಿಕೆಯಿಂದಲೇ ಸೂಚನೆ ನೀಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಿಟ್ಟ ಬೇಡಿಕೆಗಳನ್ನು ಅನುಮೋದಿಸಿ ಹಣ ಬಿಡುಗಡೆ ಮಾಡಿದ್ದೇನೆ. ನೂತನ ಆಸ್ಪತ್ರೆ ಕಟ್ಟಡವನ್ನೂ ನಾನೇ ಉದ್ಘಾಟಿಸುತ್ತೇನೆ. ಬೇಗ ಕೆಲಸ ಮುಗಿಸಿ ಎಂದು ಸಚಿವರಿಗೆ ಸೂಚನೆ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧುಕೋಕಿಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!