ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹಣದ ಬದಲು ಪೂರ್ಣ ಪ್ರಮಾಣದ ಅಕ್ಕಿ ಕೊಡಲು ತೀರ್ಮಾನಿಸಿದ್ದೇವೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ 5 ಕೆಜಿ ಅಕ್ಕಿ ಬದಲಿಗೆ 170ರೂ. ಹಣ ನೀಡಲಾಗುತ್ತಿತ್ತು. ಇದೀಗ, ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಿಗೆ ನೀಡಿದೆ. ಇದೆ ತಿಂಗಳಿನಿಂದ ಹಣದ ಬದಲು 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದರು.
ನಮ್ಮ ಇಲಾಖೆ ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಂದಿಸಿದ್ದು, ಈಗ ಕೇಂದ್ರ ಸಚಿವರು ಅಕ್ಕಿ ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಮೊದಲ ಒಂದು ಕೆಜಿ ಅಕ್ಕಿಗೆ 28 ರೂ. ನಿಗದಿಪಡಿಸಿತ್ತು. ಜನವರಿಯಿಂದ ಪ್ರತಿ ಕೆಜಿಗೆ 22.50 ರೂ.ನಂತೆ ಕೊಡಲು ನಿರ್ಧರಿಸಿದೆ ಎಂದು ಹೇಳಿದರು.
ಎಲ್ಲಿಯವರೆಗೆ ಕೇಂದ್ರ ಅಕ್ಕಿ ಕೊಡುತ್ತದೆಯೋ ಅಲ್ಲಿಯವರೆಗೆ ಪೂರ್ಣ ಪ್ರಮಾಣದ ಅಕ್ಕಿ ನೀಡುತ್ತೇವೆ ಎಂದು ತಿಳಿಸಿದರು.





