ಚಿತ್ತಾಪುರ: ಕಾಂಗ್ರೆಸ್ ಸರ್ಕಾರ ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ
2025-26 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ ತೋಟಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ರೂ 2590 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಇದರಲ್ಲಿ 656 ಕೋಟಿ ಬೆಳೆ ವಿಮೆ ಸೇರಿದೆ. ಇಷ್ಟೊಂದು ಮೊತ್ತದ ಪರಿಹಾರ ಪಡೆದುಕೊಂಡ ಜಿಲ್ಲೆ ರಾಜ್ಯದಲ್ಲಿ ಮತ್ತೊಂದಿಲ್ಲ. ಜಿಲ್ಲೆಯಲ್ಲಿ ತೊಗರಿಗೆ ನೆಟೆ ರೋಗ ಬಂದು 2 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾದಾಗ ರೂ 182 ಕೋಟಿ ಬಿಡುಗಡೆ ಮಾಡಿದ್ದೇವೆ. ಆದರೆ, ಇದೇ ತರ ಜಿಲ್ಲೆಯ ರೈತರು ನೆರೆ ಹಾಗೂ ಬರದಿಂದ ನಷ್ಟ ಅನುಭವಿಸಿದಾಗ ಅಂದಿನ ಬಿಜೆಪಿ ಸರ್ಕಾರ ಜಿಲ್ಲೆಗೆ ಕೇವಲ 22 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು ಎಂದು ನೆನಪಿಸಿದರು.
ಕೇಂದ್ರ ಸರ್ಕಾರ ನಮ್ಮ ರೈತರ ವಿರೋಧಿ ನಿಲುವು ತೆಗೆದುಕೊಂಡು ಬಿಡುಗಡೆ ಮಾಡಬೇಕಾದ ಅನುದಾನ ತಡೆಹಿಡಿದಿದ್ದರಿಂದ ರಾಜ್ಯದ ಇಡೀ ಸಚಿವ ಸಂಪುಟ ದೆಹಲಿಯಲ್ಲಿ ಪ್ರತಿಭಟನೆ ಮಾಡಿತ್ತು. ಇತಿಹಾಸದಲ್ಲಿ ರಾಜ್ಯ ಸರ್ಕಾರವೊಂದು ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದ್ದು ಇದೇ ಮೊದಲು. ಅಷ್ಟಾದರೂ ಕೇಂದ್ರ ಬಗ್ಗದಿದ್ದಾಗ ಕೊನೆಗೆ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಹಾಕಿದಾಗ ಸುಪ್ರಿಂಕೋರ್ಟ್ ಛೀಮಾರಿ ಹಾಕಿದ್ದರಿಂದ ಅನುದಾನ ಬಿಡುಗಡೆ ಮಾಡಿತ್ತು. ಇದು ರೈತರ ಪರವಾದ ನಮ್ಮ ಬದ್ದತೆಗೆ ಸಾಕ್ಷಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೋಲ್ಡ್ ಸ್ಟೋರೆಜ್ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಪಲ್ಸ್ ಪ್ರೋಟಿನ್ ಹಬ್ ಮಾಡುವ ಯೋಜನೆಗಳಿವೆ. ಈಗಾಗಲೇ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡುವ ಯಂತ್ರಗಳನ್ನು ಪರಿಚಯಿಸಲಾಗಿದೆ. ಇನ್ನು ಮುಂದೆಯೂ ಕೂಡಾ ತಂತ್ರಜ್ಞಾನ ಬಳಕೆ ಮಾಡಿಕೊಂಡು ರೈತರಿಗೆ ಮತ್ತಷ್ಡು ಸುಧಾರಿತ ಯಂತ್ರಗಳನ್ನು ಒದಗಿಸುಲಾಗುವುದು ಎಂದರು.





