Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರದ ನೆರವು: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ನೆರೆಯ ರಾಜ್ಯಗಳು ಒಡ್ಡುತ್ತಿರುವ ಸವಾಲಿನ ನಡುವೆಯೂ ನಮ್ಮ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಉದ್ದಿಮೆಗಳ ಸ್ಥಾಪನೆಗೆ ನಮ್ಮ ಸರಕಾರ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಿದೆ ಎಂದು ಗೃಹ ಸಚಿವರಾದ ಜಿ ಪರಮೇಶ್ವರ ಹೇಳಿದರು.

ಇಂದು ಎಫ್‌ಕೆಸಿಸಿಐ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಿ ಭಾರತ ರತ್ನ ಸರ್‌ ಎಂ ವಿಶ್ವೇಶ್ವರಯ್ಯ ಮೆಮೋರಿಯಲ್‌ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅವರು ಮಾತನಾಡಿದರು.

ಇಂದು ಕರ್ನಾಟಕ ರಾಜ್ಯ ಹಾಗೂ ಭಾರತ ದೇಶ ವಿಶ್ವದ ಆರ್ಥಿಕ ಹಾಗೂ ಕೈಗಾರಿಕಾ ಭೂಪಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನ ಪಡೆದುಕೊಂಡಿವೆ. ತೃತೀಯ ಹಂತದ ದೇಶಗಳಲ್ಲಿ ಗುರುತಿಸಲ್ಪಡುತ್ತಿದ್ದ ಭಾರತ ದೇಶ ಇಂದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೂರನೇ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ನಮ್ಮ ದೇಶದಲ್ಲಿ ಸಿಗುವಂತಹ ಉತ್ತಮ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲೂ ದೊರೆಯುವುದಿಲ್ಲ. ಭಾರತ ದೇಶ ಅದರಲ್ಲೂ ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆ ಅಪಾರ. ಎಫ್‌ಕೆಸಿಸಿಐ ನಂತಹ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸರ್‌ ಎಂ ವಿಶ್ವೇಶ್ವರಯ್ಯ ಉತ್ತಮ ಬುನಾದಿಯನ್ನು ಹಾಕಿದ್ದಾರೆ ಎಂದರು.

ಯುವ ಜನರು ಉದ್ದಿಮೆ ಪ್ರಾರಂಭಿಸಲು ಸಿದ್ಧಗೊಳಿಸುವುದು ಸರ್ಕಾರದ ಗುರಿ

ಕರ್ನಾಟಕ ರಾಜ್ಯ ಕೈಗಾರಿಕಾ ರಂಗದಲ್ಲಿ ವೇಗವಾಗಿ ಬೆಳೆಯುತ್ತಿದೆ, ದೇಶದ ಶೇಕಡಾ 50 ರಷ್ಟು ಸಾಫ್ಟೇವರ್‌ ಬೆಂಗಳೂರಿನಲ್ಲಿ ತಯಾರಾಗುತ್ತದೆ. ನಾವು ಯಾವುದೇ ಕ್ಷೇತ್ರದಲ್ಲೂ ಕಡಿಮೆಯಿಲ್ಲ. ಇದು ಸರ್‌ ಎಂ ವಿ ಅವರ ದೂರದೃಷ್ಟಿ. ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ರಾಜ್ಯ  ಸರ್ಕಾರ ಬಹಳಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಆದರೂ, ನಮ್ಮ ನೆರೆಯ ರಾಜ್ಯಗಳೂ ನೀಡುತ್ತಿರುವ ಸವಾಲನ್ನ ಸಮರ್ಥವಾಗಿ ನಿಭಾಯಿಸಬೇಕಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹರಾಷ್ಟ್ರದಂತಹ ರಾಜ್ಯಗಳು ನೀಡುತ್ತಿರುವ ಸವಾಲನ್ನು ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವಾಗಲೂ ಸಿದ್ದವಾಗಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ಸರಕಾರ ಎಲ್ಲಾ ಸಹಕಾರ ನೀಡಲಿದೆ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು, ಯುವ ಜನರಿಗೆ ಉದ್ಯೋಗಾವಕಾಶ ಹೆಚ್ಚಾಗಬೇಕು ಹಾಗೆಯೇ ಯುವ ಜನರು ಉದ್ದಿಮೆಗಳನ್ನು ಪ್ರಾರಂಭಿಸಲು ಮುಂದಾಗುವಂತಾಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.

ತುಮುಕೂರಿನಲ್ಲಿ ಏಷಿಯಾದ ಅತಿದೊಡ್ಡ ಕೈಗಾರಿಕಾ ಹಬ್‌ ನಿರ್ಮಾಣವಾಗುತ್ತಿದೆ. 20 ಸಾವಿರ ಏಕರೆಗಳ ಕೈಗಾರಿಕಾ ಭೂಮಿ ಸಿದ್ದವಾಗಿದ್ದು ಹೆಚ್‌ಎಲ್‌ ನಂತಹ ಪ್ರಮುಖ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಬೆಂಗಳೂರನ್ನು ಹೊರತುಪಡಿಸಿ ಬೇರೆ ಪಟ್ಟಣಗಳತ್ತ ಉದ್ಯಮಿಗಳು ಗನಮ ಹರಿಸಬೇಕು. ಸಣ್ಣ ಉದ್ಯಮದಿಂದ ಪ್ರಾರಂಭವಾದ ಭಾಗ್ಯಲಕ್ಷ್ಮಿ ಇಂದು ರಾಜ್ಯದ ಮನೆಮಾತಾಗಿದೆ. ಇಂತಹ ಕೈಗಾರಿಕೆಯ ಸ್ಥಾಪನೆಯ ಹಿಂದೆ ಇರುವಂತಹ ವ್ಯಕ್ತಿಗೆ ಈ ಪ್ರಶಸ್ತಿ ದೊರೆತಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷರಾದ ರಮೇಶ್‌ ಚಂದ್ರ ಲಹೋಟಿ ಮಾತನಾಡಿ, 108 ವರ್ಷಗಳ ಇತಿಹಾಸವನ್ನು ನಮ್ಮ ಸಂಸ್ಥೆ ಹೊಂದಿದೆ. ಸರ್‌ ಎಂ ವಿ ಅವರು ಸ್ಥಾಪನೆ ಮಾಡಿದ ಸಂಸ್ಥೆ ಕಳೆದ ಶತಮಾನದಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಕೊಡುಗೆ ನೀಡಿದೆ. ರಾಜ್ಯದ ಕೈಗಾರಿಕಾ ಕ್ಷೇತ್ರವನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ನಿಯೋಜಿತ ಅಧ್ಯಕ್ಷರಾದ ಎಂ.ಜಿ ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷರಾದ ಉಮಾ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags: