ಮೈಸೂರು: ಬಾಡಿಗೆದಾರರಿಗೊಂದು ಸಿಹಿ ಸುದ್ದಿ. ಕಾಂಗ್ರೆಸ್ ತನ್ನ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಬಾಡಿಗೆದಾರರು ಮನೆ ಬದಲಾಯಿಸಿದಾಗೆಲ್ಲ ಹಳೇ ಮನೆಯ ಆರ್.ಆರ್. ನಂಬರ್‌ನೊಂದಿಗೆ ಆಧಾರ್ ಸಂಖ್ಯೆ ಕಡಿತಗೊಳಿಸಿ, ಹೊಸದಾಗಿ ಲಿಂಕ್ ಮಾಡಿಕೊಳ್ಳಬಹುದಾಗಿದೆ.
ಆಗ, ಹೊಸ ಬಾಡಿಗೆ ಮನೆಗೆ ಹೋದ ನಂತರವೂ ತಮ್ಮ ಈ ಹಿಂದಿನ ಸರಾಸರಿಯಷ್ಟೇ ವಿದ್ಯುತ್ ಬಳಸಲು ಗ್ರಾಹಕರಿಗೆ ಅನುಕೂಲ ಆಗಲಿದೆ.
ಪ್ರಸ್ತುತ ಡಿ-ಲಿಂಕ್‌ಗೆ ಅವಕಾಶ ಇರಲಿಲ್ಲ. ಹಾಗಾಗಿ, ಯಾವುದೇ ಬಾಡಿಗೆದಾರರು ಮನೆ ಬದಲಾಯಿಸಿದರೆ ಅಲ್ಲಿದ್ದ ಈ ಹಿಂದಿನ ಸರಾಸರಿ ವಿದ್ಯುತ್ ಬಳಕೆಗೆ ಅಡ್ಜೆಸ್ಟ್ ಆಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಕೆಲವರು ತಮ್ಮ ಕುಟುಂಬದ ಬೇರೆ ಸದಸ್ಯರ ಆಧಾರ್ ಲಿಂಕ್ ಮಾಡುತ್ತಿದ್ದಾರೆ. ಈ ಕಿರಿಕಿರಿ ತಪ್ಪಿಸಲು ಇಂಧನ ಇಲಾಖೆ ಈಗ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಟ್ಟಿದೆ.
ಡಿ-ಲಿಂಕ್ ಮಾಡುವುದು ಹೇಗೆ…?
ಡಿ-ಲಿಂಕ್ ಅನ್ನು ಈಗಾಗಲೇ ಗೃಹಜ್ಯೋತಿ ಸೌಲಭ್ಯ ಪಡೆಯಲು ವಿವಿಧ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳ ಉಪಕೇಂದ್ರಗಳಲ್ಲಿ “ಆಧಾರ್’ ಲಿಂಕ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲಿಯೇ ಈ ಡಿ-ಲಿಂಕ್ ಕೂಡ ಮಾಡಬಹುದು. ಅಥವಾ ನೇರವಾಗಿ https://sevasindhu.karnataka.gov.in/ GruhaJyothiDelink/GetAadhaarData.aspx ಲಿಂಕ್ ಮೂಲಕವೂ ಗ್ರಾಹಕರು ನೋಂದಾಯಿಸಿಕೊಳ್ಳಬಹುದು. ಗೃಹಜ್ಯೋತಿ ಪೋರ್ಟಲ್ ಓಪನ್ ಆಗದೆ ಇದ್ದರೆ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದು. ಹೊಸ ಲಿಂಕ್ ಪಡೆಯುವ ಮುನ್ನ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.