ಲಕ್ಕುಂಡಿ : ಅದೊಂದು ಐತಿಹಾಸಿಕ ಗ್ರಾಮ. ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು….. ಅದ್ಭುತ ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ ಆ ಗ್ರಾಮದಲ್ಲಿ 101 ದೇವಸ್ಥಾನ, 101 ಬಾವಿಗಳ ಐತಿಹಾಸಿಕ ಪ್ರತೀತಿ ಇದೆ. ಆ ಗ್ರಾಮದಲ್ಲಿ ಮನೆ ಕಟ್ಟಡದ ಪಾಯ ತೆಗೆಯುವ ವೇಳೆ ಚಿನ್ನದ ನಿಧಿ ಪತ್ತೆಯಾಗಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ಸನ್ಮಾನ ಮಾಡಲಾಗಿದೆ. ಸದ್ಯ ಚಿನ್ನಾಭರಣ ಪುರಾತತ್ವ ಇಲಾಖೆ ಕೈಸೇರಿದ್ದು, ಲಕ್ಕುಂಡಿ ಗುಪ್ತನಿಧಿಯ ವಾರಸುದಾರರು ಯಾರು? ಆ ಜಾಗದಲ್ಲಿ ಉತ್ಖನನ ನಡೆಯುತ್ತಾ? ಎಂಬೆಲ್ಲಾ ಕೂತುಹಲ ಹೆಚ್ಚಿದೆ.
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜು ರಿತ್ತಿ ಎಂಬುವರು ಮನೆ ಕಟ್ಟಿಸಲು ಅಡಿಪಾಯ ತೆಗೆಯುವ ವೇಳೆ ಶನಿವಾರ ಚಿನ್ನದ ನಿಧಿ ಸಿಕ್ಕಿದೆ. ತಾಮ್ರದ ಪುಟ್ಟ ಬಿಂದಿಗೆಯಲ್ಲಿ ಅರ್ಧ ಕೆ.ಜೆ.ಗೂ ಹೆಚ್ಚಿನ ತೂಕದ ಚಿನ್ನಾಭರಣ ಸಿಕ್ಕಿದೆ.
ಈ ಬೆನ್ನಲ್ಲೇ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಈ ಪ್ರದೇಶವನ್ನು ಹಿಂದೆ ಚಿನ್ನದ ನಾಣ್ಯಗಳನ್ನು ತಯಾರಿಸುವ ಟಂಕಶಾಲೆ ಎಂದು ಗುರುತಿಸಲಾಗಿದ್ದು, ರಾಜ ಮಹಾರಾಜರ ಅವಶೇಷಗಳು ಮತ್ತು ನೂರಾರು ಬಾವಿಗಳು ಇಲ್ಲಿದ್ದ ಬಗ್ಗೆ ದಾಖಲೆಗಳಿವೆ. ರಾಜ್ಯ ಸರ್ಕಾರವು ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ನಡೆಸಬೇಕು. ಇದರಿಂದ ಗ್ರಾಮದ ಐತಿಹಾಸಿಕ ಕುರಿತು ಇನ್ನಷ್ಟು ಮಹತ್ವದ ಅಂಶಗಳು ಹೊರಬರಲಿವೆ ಎನ್ನುತ್ತಾರೆ ಇತಿಹಾಸಕಾರರು ಮತ್ತು ಸಂಶೋಧಕರು.

ಅವಶೇಷಗಳ ಅಸ್ತಿತ್ವಕ್ಕೆ ಪುಷ್ಟಿ
ಕಳೆದ ವರ್ಷ ಪ್ರಾಚ್ಯಾವಶೇಷಗಳ ಅನ್ವೇಷಣೆ ವೇಳೆ 15 ಕ್ಕೂ ಅವಶೇಷಗಳು ಪತ್ತೆಯಾಗಿದ್ದವು. ಇದಾದ ನಂತರ ಯುನೇಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ಸರಕಾರ ಪ್ರಸ್ತಾವನೆ ಕೂಡ ಕಳಿಸಿದೆ. ಮುಖ್ಯಮಂತ್ರಿಗಳು ಉತ್ಖನನಕ್ಕೆ ಚಾಲನೆ ನೀಡಿದ್ದು ಈಗ ಗ್ರಾಮದಲ್ಲಿ ತಂಬಿಗೆ ದೊರಕಿರುವುದು ಇಲ್ಲಿ ಅವಶೇಷಗಳ ಇದ್ದವು ಎನ್ನುವುದಕ್ಕೆ ಪುಷ್ಟಿ ದೊರೆತಂತಾಗಿದೆ. ಇನ್ನು ಈ ತಂಬಿಗೆ ಯಾವ ಅರಸರ ಕಾಲದ್ದು ಎಂಬುದು ಇತಿಹಾಸ ತಜ್ಞರ ಪರಿಶೀಲನೆ ನಂತರ ಗೊತ್ತಾಗಲಿದೆ.
ಇದು ನಿಧಿ ಅಲ್ಲ : ಪುರಾತತ್ವ ಅಧಿಕ್ಷಕ ರಮೇಶ್
ನಿಧಿ ಪತ್ತೆಯಾದ ಸ್ಥಳಕ್ಕೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಮಾತನಾಡಿದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿ, ಇದು ನಿಧಿ ಅಲ್ಲ. ಅದೊಂದು ಯಾರೋ ಪೂರ್ವಜರು ಇಟ್ಟಿರುವ ಚಿನ್ನದ ಹುಂಡಿ. ಯಾವ ಕಾಲದ್ದು ಚಿನ್ನ ಅಂತಾ ಪರಿಶೀಲನೆ ಮಾಡುತ್ತೇವೆ, ಮೇಲ್ನೋಟಕ್ಕೆ ನೋಡಿದಾಗ ಬಹಳ ಹಿಂದಿನದು ಅಂತಾ ಅನಿಸುತ್ತಿಲ್ಲ, ಬಂಗಾರ ಮನೆಯಲ್ಲಿ ಸಿಕ್ಕಿದೆ ಅಂದರೆ ಇದು ಕುಟುಂಬಕ್ಕೆ ಸೇರಿದ್ದು, ದೇವಸ್ಥಾನದಲ್ಲಿ ಸಿಕ್ಕಿದ್ರೆ ಅದು ರಾಜಮನೆತನದ್ದು, ಇದು ರಾಜ ಮನೆತನಕ್ಕೆ ಸೇರಿದ್ದರೆ ಲಾಂಚನಾ ಇರ್ತಾಯಿತ್ತು, ಚಿನ್ನದ ಆಭರಣಗಳು ಡ್ಯಾಮೇಜ್ ಆಗಿವೆ, ಹಾಗಾಗಿ ಆ ಕುಟುಂಬ ಅವುಗಳನ್ನು ಮನೆಯಲ್ಲಿ ಇಟ್ಟಿದೆ, ಹಿಂದಿನ ಕಾಲದವರು ಮನೆಯ ಓಲೆ ಕೆಳೆಗೆ ಹೊಗಿದು ಇಡುತ್ತಿದ್ದರು ಎಂದು ಹೇಳಿದ್ದಾರೆ.

ನಿಧಿಯ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಇನ್ನು ಲಕ್ಕುಂಡಿ ಗುಪ್ತನಿಧಿಯ ವಾರಸುದಾರರು ಯಾರು? ನಿಧಿ ಪತ್ತೆ ಹಚ್ಚಿದವರಿಗೂ ಸಿಗಬೇಕಾ ಪಾಲು? ಎಂಬ ಪ್ರಶ್ನೆಗಳು ಎದ್ದಿವೆ. ಪಾಯ ತೆಗೆಯುವಾಗ ಸಿಕ್ಕ ಚಿನ್ನಿದ ನಿಧಿಯ ಹಕ್ಕುದಾರ ಯಾರು? ನಿಧಿ ಕಾಯ್ದೆಯ ಪ್ರಕಾರ ಯಾರಿಗೆ ಸೇರಬೇಕು ಚಿನ್ನಾಭಾರಣ? ಎಂಬುದಕ್ಕೆ ಕಾನೂನಿನಲ್ಲಿ ಉಲ್ಲೇಖ ಇದೆ. ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ. 100 ವರ್ಷಕ್ಕಿಂತ ಹಳೆಯದಾದ ನಿಧಿ ಸರ್ಕಾರದ ಸ್ವತ್ತು ಆಗಲಿದೆ. ನಿಧಿ ಸರ್ಕಾರದ ಸ್ವತ್ತಾದರೂ ಷರತ್ತುಗಳು ಅನ್ವಯ ಆಗಲಿದೆ. ಕಾಯ್ದೆ ಪ್ರಕಾರ ನಿಧಿ ಪತ್ತೆ ಹಚ್ಚಿದವರಿಗೂ ಪಾಲು ಸಿಗಬೇಕು. ನಿಧಿ ಸಿಕ್ಕ ಜಾಗದ ಮಾಲೀಕರಿಗೂ ಭಾಗ ಸಿಗಬೇಕು.
ನಿಧಿ ಕಾಯ್ದೆಯಲ್ಲಿರೋದು
* ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ
* ಜಾಗದ ಮಾಲೀಕರಿಗೆ ಐದನೇ ಒಂದು ಭಾಗ ಕೊಡಬೇಕು
* ಪತ್ತೆ ಹಚ್ಚಿದವರಿಗೂ ನಿಧಿ ಮೌಲ್ಯದ ಒಂದು ಭಾಗ ಕೊಡಬೇಕು
* ನಿಧಿ ಕಾಯ್ದೆ ಪ್ರಕಾರ ಮಾಲೀಕರರಿಗೂ ಪಾಲು ಸಿಗಬೇಕು
ಲಕ್ಕುಂಡಿ ಹಿನ್ನೆಲೆ..
ಲಕ್ಕುಂಡಿ ಈ ಹಿಂದೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಲ್ಲದೆ, ಹೊಯ್ಸಳರ ಆಡಳಿತದ ಪ್ರಭಾವಕ್ಕೂ ಒಳಗಾಗಿತ್ತು. ಜೊತೆಗೆ, 10ನೇ ಶತಮಾನದಲ್ಲಿಯೇ ಟಂಕಸಾಲೆ ನಿರ್ಮಾಣದೊಂದಿಗೆ ಪ್ರಮುಖ ವಾಣಿಜ್ಯ ನಗರವಾಗಿಯೂ ಅಭಿವೃದ್ಧಿ ಹೊಂದಿತ್ತು. ಅತ್ತಿಮಬ್ಬೆಯ ಲಕ್ಕುಂಡಿ ಶಾಸನ ಸೇರಿ ಕನ್ನಡ, ಸಂಸ್ಕೃತ ಭಾಷೆಯ ಹಲವು ಶಾಸನಗಳು ಇಲ್ಲಿ ಸಿಕ್ಕಿವೆ. ಹಿಂದೂ, ಜೈನ ಸ್ಮಾರಕಗಳು ಸೇರಿ ಕಲ್ಯಾಣ ಚಾಲುಕ್ಯ ಯುಗದ ಹಿಂದೂ ವಾಸ್ತುಶಿಲ್ಪದ ಅಧ್ಯಯನಕ್ಕೆ ಇದು ಪ್ರಮುಖ ಕೇಂದ್ರ. ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಣೆಗೊಳಪಟ್ಟಿರುವ ಶಿಲ್ಪ ಗ್ಯಾಲರಿಯೂ ಇಲ್ಲಿದೆ.






