Mysore
22
haze

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ನಟಿ ರನ್ಯಾ ರಾವ್‌ ಬಂಗಾರದ ಹಿಂದಿನ ಕತೆಯೇ ಬಲು ರೋಚಕ!

ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಚಿನ್ನ ತಂದ ಆರೋಪದ ಮೇಲೆ ಚಂದನವನದ ನಟಿ ರಾವ್‌ ಅವರನ್ನು (ಡಿಆರ್‌ಐ) ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ನಟಿಯ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಅಂತಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಚಿನ್ನ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿಆರ್‌ಐ ಅಧಿಕಾರಿಗಳು ಮೊನ್ನೆ ರನ್ಯಾ ಬಂಧನ ಬಳಿಕ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್ ಫ್ಲ್ಯಾಟ್ ನಲ್ಲಿ ರನ್ಯಾ ಮನೆ ಇದ್ದು, 5ಕ್ಕೂ ಹೆಚ್ಚು ಅಧಿಕಾರಿಗಳು ಫ್ಲ್ಯಾಟ್‍ನಲ್ಲಿ ಪರಿಶೀಲನೆ ನಡೆಸಿದ್ದರು, ಬಳಿಕ 3 ದೊಡ್ಡ ಪೆಟ್ಟಿಗೆಯನ್ನು ನಗದು ಹಣ ಮತ್ತು ಚಿನ್ನವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು. ರನ್ಯಾ ಮನೆಯಲ್ಲಿ 2.06 ಕೆಜಿ ಚಿನ್ನ ಹಾಗೂ 2.67 ಕೋಟಿ ನಗದು ಹಣ ಪತ್ತೆಯಾಗಿದೆ.

ಪ್ರಭಾವಿ ಸಂಪರ್ಕ ಬಳಸಿ ಸೆಕ್ಯೂರಿಟಿ ಚೆಕ್‌ ತಪ್ಪಿಸಿಕೊಳ್ಳುತ್ತಿದ್ದ ನಟಿ…

ನಟಿ ರನ್ಯಾ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ಗಲ್ಫ್ ದೇಶಕ್ಕೆ ಹೋಗಿ ಬಂದಿದ್ದರಂತೆ. ಪ್ರತಿ ಬಾರಿ ನಟಿ ರನ್ಯಾ ವಿಮಾನ ನಿಲ್ದಾಣಕ್ಕೆ ಹೋದಾಗಲೂ ಹಿರಿಯ ಅಧಿಕಾರಿಗಳು ಬಳಸುವ ಅಫಿಷಿಯಲ್ ಪ್ರೋಟೊಕಾಲ್ ಸರ್ವೀಸ್ ಅನ್ನು ಬಳಸಿ ಸೆಕ್ಯುರಿಟಿ ಚೆಕ್‍ನಿಂದ ತಪ್ಪಿಸಿಕೊಳ್ಳುತ್ತಿದ್ದರು. ಪ್ರತಿಬಾರಿ ಚಿನ್ನ ಕಳ್ಳಸಾಗಣೆಗೆ ಹೋದಾಗಲು ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಹೋಗುತ್ತಿದ್ದರು. ಬೆಲ್ಟ್‍ನ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು, ಆ ಬೆಲ್ಟು ಹೊರಗೆ ಕಾಣದಂತೆ ಬಟ್ಟೆ ಹಾಕಿಕೊಂಡು ಬರುತ್ತಿದ್ದರು ಎಂದು ಅರೋಪಿಸಲಾಗಿದೆ. ಹಾಗಾಗಿ ಯಾರಿಗೂ ಸಹ ನಟಿಯ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ದೆಹಲಿಯಲ್ಲಿ ಕೂತಿದ್ದ ಡಿಆರ್‌ಐ ಅಧಿಕಾರಿಗಳಿಗೆ ಅನುಮಾನ ಬಂದು ತಪಾಸಣೆ ನಡೆದಾಗ ನಟಿಯ ಕಳ್ಳತನ ಸಿಕ್ಕಿಹಾಕಿಕೊಂಡಿದೆ.

ತನಿಖೆ ಚುರುಕು..
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ರಾಜ್ಯದ ಡಿಜಿಪಿಯವರ ಮಲ ಮಗಳು, ನಟಿ ರನ್ಯಾರಾವ್ ಅವರ ಜಾಲದ ಬಗ್ಗೆ ಡಿಆರ್‍ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರನ್ಯಾ ರಾವ್ ದುಬೈ, ಮಲೇಶಿಯಾ ಸೇರಿದಂತೆ ವಿವಿಧ ದೇಶಗಳಿಗೆ ಯಾವ ಕಾರಣಕ್ಕಾಗಿ ಹೋಗುತ್ತಿದ್ದರು, ಅಲ್ಲಿ ಯಾರನ್ನೂ ಭೇಟಿ ಮಾಡುತ್ತಿದ್ದರು, ವಿದೇಶಿಗಳಿಗೆ ಹೋಗುವಾಗ ಏನನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂಬ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು(ಡಿಆರ್‍ಐ) ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ವಿದೇಶದಿಂದ ವಾಪಸ್ ಬರುವಾಗ ಈಕೆ ಏನನ್ನು ತರುತ್ತಿದ್ದರು ಎಂಬ ಬಗ್ಗೆ ಕೂಲಂಕುಶವಾಗಿ ಶೋಧ ನಡೆಸುತ್ತಿರುವ ಅಧಿಕಾರಿಗಳು ಈಗಾಗಲೇ ಆಕೆಯ ಪಾಸ್ ಪೋರ್ಟ್‍ನ್ನು ವಶಪಡಿಸಿಕೊಂಡಿದ್ದು, ಯಾವ ಯಾವ ದೇಶಗಳಿಗೆ ಹೋಗಿದ್ದರು ಎಂಬುವ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

ಸಿಕ್ಕಿಬಿದ್ದಿದ್ದು ಹೀಗೆ…
ಈ ಹಿಂದೆ ವಿದೇಶದಿಂದ ಏರ್‍ಪೋರ್ಟ್‍ಗೆ ಬಂದು ಇಳಿದಾಗ, ನಾನು ಡಿಜಿ ಅವರ ಮಗಳು ಎಂದು ಹೇಳಿ ತಪಾಸಣೆಗೆ ಒಳಗಾಗುತ್ತಿರಲಿಲ್ಲ. ಈ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.

ಮೊನ್ನೆ ರಾತ್ರಿ ದುಬೈನಿಂದ ರನ್ಯಾ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ಅಧಿಕಾರಿಗಳಿಗೆ ಗೊತ್ತಾಗಿದೆ. ಅಂದು ಆಕೆ ಬಂದಾಗಲೂ ತಪಾಸಣೆಗೆ ಒಳಗಾಗಲಿಲ್ಲ. ಈಕೆಯ ವರ್ತನೆಯಿಂದ ಅನುಮಾನಗೊಂಡು ಅಲ್ಲೆ ಕಾದು ಕುಳಿತ್ತಿದ್ದ ಡಿಆರ್‌ಐ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ 12.56ಕೋಟಿ ಬೆಲೆಯ 14 ಕೆ.ಜಿ. ಚಿನ್ನದ ಗಟ್ಟಿ ಪತ್ತೆಯಾಗಿತ್ತು.

ದುಬೈನಿಂದ ಏರ್‍ಪೋರ್ಟ್‍ಗೆ  ರನ್ಯಾರಾವ್ ಬರುವ ಮೊದಲೇ 14 ಚಿನ್ನದ ಬಿಸ್ಕೆಟ್‍ಗಳನ್ನು ತೊಡೆ ಹಾಗೂ ದೇಹದ ಇನ್ನಿತರ ಭಾಗಗಳಲ್ಲಿ ಗಮ್ ಹಾಕಿ ಅಂಟಿಸಿಕೊಂಡಿದ್ದರಲ್ಲದೆ, ಟೇಪ್ ಹಾಕಿ ಸುತ್ತಿಕೊಂಡಿದ್ದರು. ಅಲ್ಲದೇ ಏರ್‍ಪೋರ್ಟ್‍ನಲ್ಲಿ ತಪಾಸಣೆಗೆ ಒಳಗಾದಾಗ ಸ್ಕಾನರ್‍ನಲ್ಲಿ ಅನುಮಾನ ಬಾರದಂತೆ ಈ ಟೇಪ್ ಮೇಲೆ ಕ್ರೆಪೆ ಬ್ಯಾಂಡೇಜ್ ಸುತ್ತಿಕೊಂಡಿದ್ದದ್ದು ಪತ್ತೆಯಾಗಿದೆ.

ಏರ್‍ಪೋರ್ಟ್‍ನಿಂದ ಆಕೆಯನ್ನು ಕಚೇರಿಗೆ ಕರೆದೊಯ್ಯು ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಮಾ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ನಡುವೆ ನಿನ್ನೆಡಿಆರ್‌ಐ ಅಧಿಕಾರಿಗಳು ಆಕೆಯ ನಗರದ ಲ್ಯಾವಲ್ಲಿ ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್‍ನ ಪ್ಲಾಟ್ ಮೇಲೆ ದಾಳಿ ಮಾಡಿ ಶೋಧ ನಡೆಸಿದಾಗ 2.6ಕೋಟಿ ಬೆಲೆಯ ಚಿನ್ನ, ನಗದು ಸೇರಿದಂತೆ 4.73ಕೋಟಿ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ರನ್ಯಾರಾವ್ ಅವರ ಒಟ್ಟು ಆಸ್ತಿ ಎಷ್ಟಿದೆ, ಎಲ್ಲೆಲ್ಲಿವೆ, ಆಸ್ತಿಗಳನ್ನು ಯಾವ ರೀತಿ ಖರೀದಿಸಿದ್ದಾರೆ. ಎಷ್ಟು ಬ್ಯಾಂಕ್‍ಗಳಲ್ಲಿ ಅಕೌಂಟ್‍ಗಳಿವೆ. ಆ ಅಕೌಂಟ್‍ಗಳಲ್ಲಿರುವ ಹಣದ ಮಾಹಿತಿ, ಅಷ್ಟೊಂದು ಹಣ, ಆಭರಣದ ಮೂಲಗಳ ಬಗ್ಗೆ ಮಾಹಿತಿ ಪತ್ತೆ ಹಚ್ಚುತ್ತಿದ್ದಾರೆ.

ಈಕೆಯ ಮೊಬೈಲ್‍ಗಳನ್ನು ಪಡೆದಿರುವ ಅಧಿಕಾರಿಗಳು ಅದರಲ್ಲಿರುವ ಸಂಪರ್ಕದ ಜಾಲದ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಅಂದಹಾಗೆ ನಟಿ ರನ್ಯಾ, ಕನ್ನಡದ `ಮಾಣಿಕ್ಯ’ ಮತ್ತು `ಪಟಾಕಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಸಿನಿಮಾಗಳಲ್ಲಿಯೂ ರನ್ಯಾ ನಟಿಸಿದ್ದು, ರನ್ಯಾ ಮೂಲತಃ  ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ರನ್ಯಾ ಅವರ ತಂದೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದು, ಅಧಿಕಾರಿಯ ಮೊದಲ ಹೆಂಡತಿಯ ಮೊದಲ ಪತಿಯ ಮಗಳಾಗಿದ್ದಾರೆ.

Tags:
error: Content is protected !!