Mysore
20
overcast clouds
Light
Dark

ಜನವರಿ 22ರಂದು ಗೋಧ್ರಾ ರೀತಿ ಅಪಾಯ ಸಂಭವಿಸುವ ಮಾಹಿತಿ ಇದೆ: ಬಿಕೆ ಹರಿಪ್ರಸಾದ್‌

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ಜನವರಿ 22ರಂದು ನಡೆಯಲಿದೆ. ರಾಮಮಂದಿರವನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ತೆರಳಲು ಈಗಾಗಲೇ ಯೋಜನೆ ರೂಪಿಸಿಕೊಂಡಿದ್ದು, ಇದಕ್ಕೆ ಬೇಕಾದ ವಿಮಾನ ಸೇವೆ, ರೈಲು ಸೇವೆಗಳನ್ನು ಸರ್ಕಾರ ಆಯೋಜನೆ ಮಾಡಲು ಮುಂದಾಗಿದೆ.

ಈ ಕುರಿತು ಇದೀಗ ಕಾಂಗ್ರೆಸ್‌ ಮುಖಂಡ ಬಿ ಕೆ ಹರಿಪ್ರಸಾದ್‌ ಪ್ರತಿಕ್ರಿಯಿಸಿದ್ದು ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್‌ ಗೋಧ್ರಾ ದುರಂತದ ರೀತಿ ಮತ್ತೆ ಅಪಾಯ ಸಂಭವಿಸುವ ಮಾಹಿತಿ ಇದೆ, ನಮಗೆ ಮಾಹಿತಿ ಸಿಗುತ್ತಿದೆ. ಹೀಗಾಗಿ ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ಒದಗಿಸುವ ಕೆಲಸ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ.

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮವಲ್ಲ, ಅದೊಂದು ರಾಜಕೀಯ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿಯಾಗಬೇಕಿತ್ತು, ಶಂಕರಾಚಾರ್ಯರು ಮೂಲ ಗುರುಗಳು. ಅವರ ರೀತಿಯ ಯಾವುದೇ ಧರ್ಮ ಗುರುಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆಗ ನಾವು ಆಮಂತ್ರಣ ಇಲ್ಲದೆಯೇ ಹೋಗುತ್ತಿದ್ದೆವು. ಆದರೆ ಈಗ ನಡೆಯುತ್ತಿರುವುದು ರಾಜಕೀಯ ಕಾರ್ಯಕ್ರಮ. ಪ್ರಧಾನಿ ಮೋದಿ, ಅಮಿತ್‌ ಶಾ ಉದ್ಘಾಟನೆಗೆ ಬರುತ್ತಿದ್ದಾರೆ. ಇದು ರಾಜಕೀಯ ಕಾರ್ಯಕ್ರಮ ಅವರ ಧರ್ಮ ಯಾವುದು ಅಂತ ಗೊತ್ತಾಗಿಲ್ಲ. ಅಯೋಧ್ಯೆ ಇತಿಹಾಸಕ್ಕೂ ಪುರಾಣಕ್ಕೂ ಬಹಳ ವ್ಯತ್ಯಾಸವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಭಿಪ್ರಾಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಇನ್ನು ನನಗೆ ಸಿದ್ದರಾಮಯ್ಯವರೇ ರಾಮ ಎಂದು ಹೆಚ್‌ ಆಂಜನೇಯ ನೀಡಿದ ಹೇಳಿಕೆ ಕುರಿತು ಮಾತನಾಡಿದ ಬಿಕೆ ಹರಿಪ್ರಸಾದ್‌ ಎಲ್ಲರಿಗೂ ಭಕ್ತರಿರುತ್ತಾರೆ. ಕೈಲಾಸ ಆಶ್ರಮದ ನಿತ್ಯಾನಂದ ಸ್ವಾಮೀಜಿಗೂ ಭಕ್ತರಿದ್ದಾರೆ. ಅದೇ ರೀತಿ ಸಿದ್ದರಾಮಯ್ಯನವರಿಗೂ ಭಕ್ತರಿದ್ದಾರೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ