ತುಮಕೂರು: ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ ವತಿಯಿಂದ ನೀಡಲಾಗುವ ಸಿದ್ಧಗಂಗಾ ಶ್ರೀ ಪ್ರಶಸ್ತಿಗೆ ಈ ಬಾರಿ ಹಿರಿಯ ವಿದ್ವಾಂಸ ಗೊ.ರು.ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯ ಸ್ಮರಣೆಯೂ ಇದೇ ಜನವರಿ 21 ರಂದು ನಡೆಯಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀ ಪ್ರಶಸ್ತಿಯನ್ನು ಸಾಧನೆ ಮಾಡಿದ ಅನೇಕ ಗಣ್ಯರಿಗೆ ನೀಡಲಾಗುವುದು. ಹೀಗಾಗಿ ಗೊ.ರು.ಚನ್ನಬಸಪ್ಪ ಅವರಿಗೆ 2024-25ನೇ ಸಾಲಿನ ಸಿದ್ದಗಂಗಾ ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
2024ರಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಮ್ಮೇಳನಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರು ತಮ್ಮ ಕಾರ್ಯ ನಿರ್ವಹಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 21 ರಂದು ಇವರಿಗೆ ಸಿದ್ಧಗಂಗಾ ಮಠದಲ್ಲಿ ಪ್ರಶಸ್ತಿ ಪ್ರದಾನ ಮಾಡಿ, ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.





