ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್.ರಾಜಣ್ಣ ಅವರು ದೂರು ನೀಡಿದರೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.23) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹನಿಟ್ರ್ಯಾಪ್ ವಿಚಾರವಾಗಿ ರಾಜಣ್ಣ ಅವರು ಇನ್ನೂ ದೂರು ನೀಡಿಲ್ಲ. ಅವರು ದೂರು ನೀಡಿದ ಕೂಡಲೇ ತನಿಖೆಗೆ ವಹಿಸುತ್ತೇವೆ. ಅಲ್ಲದೇ ನಾನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉನ್ನತ ಮಟ್ಟದ ತನಿಖೆಗೆ ಅಂದರೆ ಯಾವ ತನಿಖೆಗೆ ಈ ಕೇಸ್ ಅನ್ನು ವಹಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರ ಹನಿಟ್ರ್ಯಾಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜಣ್ಣ ಅವರು ಇಷ್ಟೊತ್ತಿಗೆ ದೂರು ನೀಡಿದ್ದರೆ ಯಾವ ಸ್ವರೂಪದ ತನಿಖೆ ಎಂದು ಘೋಷಣೆ ಮಾಡುತ್ತಿದ್ದೇವು. ಆದರೆ ಈಗಾಗಲೇ ಯಾವ ತನಿಖೆಗೆ ನೀಡಬೇಕೆಂದು ಪ್ರಾಥಮಿಕವಾಗಿ ಅಂದುಕೊಂಡಿದ್ದೇವೆ. ಹಾಗಾಗಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿದ ಬಳಿಕ ಯಾವ ಮಟ್ಟದ ತನಿಖೆ ಎಂದು ಪ್ರಕಟಿಸುತ್ತೇವೆ ಎಂದು ಹೇಳಿದರು.
ಇನ್ನೂ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂಬ ಬಿಜೆಪಿ ಆಗ್ರಹದ ಬಗ್ಗೆ ಮಾತನಾಡಿದ ಅವರು, ನಾವು ನಮ್ಮದೇ ರೀತಿಯಲ್ಲಿ ಪರಿಶೀಲಿಸಿ ನಿರ್ಧಾರ ಮಾಡ್ತೇವೆ. ಇಷ್ಟು ದೊಡ್ಡ ಘಟನೆ ನಡೆದಿದೆ, ವಿಧಾನಸೌಧದಲ್ಲಿ ಚರ್ಚೆ ಆಗಿದೆ. ನಡೆಯದಿರೋದೆಲ್ಲ ನಡೆದಿದೆ. ಅಂತಹದರಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಅಂದರೆ ಆಗಲ್ಲ ಎಂದರು.
ಇದೇ ಸಂದರ್ಭದಲ್ಲಿ ಸದನದಲ್ಲಿ ಏಕಾಏಕಿ ರಾಜಣ್ಣ ಮಾತಾಡಿದ್ದಕ್ಕೆ ಹೈಕಮಾಂಡ್ ಬೇಸರವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ. ಹಾಗಾಗಿ ಈ ಕುರಿತು ನನಗೆ ಅಷ್ಟು ಗೊತ್ತಿಲ್ಲ ಎಂದು ತಿಳಿಸಿದರು.





