ಬೆಂಗಳೂರು: ಭದ್ರತಾ ವೈಫಲ್ಯದ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದ ಪ್ರಕರಣದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಸಿಎಂ ಏಕೆ ಅಷ್ಟೊಂದು ಉದ್ವೇಗಕ್ಕೆ ಒಳಗಾದರು ಎಂಬುದು ಗೊತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದಾರು ಮಂದಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಕಾಂಗ್ರೆಸ್‍ನ ಶಾಲು ಹಾಕಿಕೊಂಡು ಒಳಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಇದರಲ್ಲಿ ಭದ್ರತಾ ಲೋಪವಾಗಿದೆಯೇ ಎಂಬುದನ್ನು ಮಾಹಿತಿ ನೀಡಲು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾಂಗ್ರೆಸ್ ಶಾಲು ಹಾಕಿಕೊಂಡು ನಮ ಪಕ್ಷದ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿ ನಂತರ ಭದ್ರತಾ ವೈಫಲ್ಯ ಎಂದು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಅವರು ಬಿಜೆಪಿಯ ಶಾಲು ಹಾಕಿಕೊಂಡು ಬಂದಿದ್ದರೆ ಅದು ಬೇರೆಯ ಮಾತು. ಕಾಂಗ್ರೆಸ್ ಶಾಲು ಹಾಕಿಕೊಳ್ಳಲು ಅವರಿಗೆ ಯಾವ ನೈತಿಕತೆ ಇದೆಯೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಪಹಲ್ಗಾಮ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಮೃದು ಧೋರಣೆ ಹೊಂದಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಕಾಂಗ್ರೆಸ್‍ನಷ್ಟು ತ್ಯಾಗ ಬಲಿದಾನಗಳನ್ನು ಬೇರೆ ಇನ್ಯಾರು ಮಾಡಲು ಸಾಧ್ಯವಿಲ್ಲ. ಬೇರೆಯವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದರು.
ಇನ್ನು ಪಾಕಿಸ್ತಾನದ ಪ್ರಜೆಗಳು ದೇಶದಲ್ಲಿ 400 ಜನ ಇದ್ದರು. ಅವರನ್ನು ವಾಪಸ್ ಕಳುಹಿಸಲಾಗಿದೆ. ಲಾಂಗ್‍ಟರ್ಮ್ ವೀಸಾ ಹಾಗೂ ಇಲ್ಲಿಯವರನ್ನು ಮದುವೆಯಾಗಿ ವಾಸಿಸುವವರಿಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ ಎಂದರು. ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದು ಪುನರುಚ್ಚರಿಸಿದರು.





