ಬೆಂಗಳೂರು: ಮುಡಾ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಸಿಎಂ ಸಿದ್ದರಾಮಯ್ಯ ಪರ ನಾವಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.29) ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಪ್ರಕರಣವನ್ನು ಸಿಬಿಐಗೆ ನೀಡುವ ಬಗ್ಗೆ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ. ಆದೇಶ ಬಂದ ಮೇಲೆ ತಿಳಿಯುತ್ತದೆ. ಅಲ್ಲಿಯವರೆಗೂ ಕಾಯೋಣ, ಆದೇಶ ಬಂದ ಮೇಲೆ ಮುಂದಿನ ಚರ್ಚೆ ಮಾಡೋಣ ಎಂದರು.
ಮುಡಾ ಪ್ರಕರಣವನ್ನು ನಾವು ಮೊದಲ ದಿನದಿಂದಲೂ ರಾಜಕೀಯ ಪ್ರೇರಿತ ಎಂದು ಹೇಳುತ್ತಲೇ ಇದ್ದೇವೆ. ಬಿಜೆಪಿಯವರು ರಾಜಕೀಯ ದುರುದ್ದೇಶವನಿಟ್ಟುಕೊಂಡು ಹೀಗೆಲ್ಲಾ ಮಾಡುತ್ತಿದ್ದಾರೆ. ಆದರೆ ನಾವು ಮತ್ತು ನಮ್ಮ ಪಕ್ಷ ಸಿಎಂ ಸಿದ್ದರಾಮಯ್ಯ ಅವರ ಪರ ನಿಂತುಕೊಳ್ಳುತ್ತೇವೆ. ಅದರಲ್ಲಿ ಯಾವುದೇ ರೀತಿಯ ಪ್ರಶ್ನೆ ಬೇಡ ಎಂದು ಹೇಳಿದರು.





