ಬೆಂಗಳೂರು: ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಅಂತೆಯೇ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರದಲ್ಲಿಯೂ ಎ.ಎಸ್.ಪೊನ್ನಣ್ಣನಿಗೆ ಮತ್ತು ಮಂಥರ್ ಗೌಡ ಅವರಿಗೂ ಒಂದೇ ಕಾನೂನುನ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ವಿನಯ್ ಸೋಮಯ್ಯ ಡೆತ್‌ನೋಟ್‌ನಲ್ಲಿ ಕಾಂಗ್ರೆಸ್ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಭಾರತ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಹಾಗಾಗಿ ಕಾನೂನಿನ ಅಡಿಯಲ್ಲಿ ಏನೇನೂ ಕ್ರಮ ತೆಗೆದುಕೊಳ್ಳಬೇಕೆಂಬುದು ಇದೆಯೋ ಅಂತೆಯೇ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಮತ್ತು ಬೆಂಗಳೂರಿನಲ್ಲಿಯೂ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಮಗ್ರ ತನಿಖೆಯಾದ ಬಳಿಕ ಇವರಿಬ್ಬರೂ ವಿನಯ್ ಆತ್ಮಹತ್ಯೆಗೆ ಕಾರಣವಾಗಿದ್ದರೆಂದು ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿಯವರು ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾರೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಫೆಬ್ರವರಿಯಲ್ಲಿ ಆಗಿರುವ ಘಟನೆ ವಿನಯ್ ಆತ್ಮಹತ್ಯೆ ಮಾಡಿಕೊಂಡ ಮೇಲೆ ಬೆಳಕಿಗೆ ಬಂದಿದೆ. ಆ ಬಗ್ಗೆಯೂ ತನಿಖೆಯಾಗಬೇಕು. ಆದರೆ ಶಾಸಕರ ಹೆಸರು ಹೇಳಿದ ತಕ್ಷಣ ಅದನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ವಾಟ್ಸ್‌ಆಪ್ ಅನ್ನು ಪರಿಶೀಲನೆ ಮಾಡಿದಾಗ ಏನಾದರು ಪಾತ್ರ ಇದೆಯೆಂದು ಕಂಡರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮೃತ ವಿನಯ್ ಅವರ ಡೆತ್‌ನೋಟ್‌ವಿಲ್ಲವೆಂದು ಹೇಳುತ್ತಾರೆ. ಅಲ್ಲದೇ ಅವರೇ ವಾಟ್ಸ್‌ಆಪ್‌ನಲಿ ಶೇರ್ ಮಾಡಿದ್ದಾರೆ ಎಂದು ಮೊದಲು ಸಾಬೀತಾಗಬೇಕು. ಇನ್ನು ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡೋಕೆ ಅವಕಾಶ ಇಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಕ್ರಮ ಆಗುತ್ತದೆ. ಹೀಗಾಗಿ ಸಂಪೂರ್ಣ ತನಿಖೆ ಮಾಡಿ ವರದಿ ನೀಡಬೇಕು ಎಂದು ಹೇಳಿದರು.