ಬೆಂಗಳೂರು: ಇಲ್ಲಿನ ಬಿಟಿಎಂ ಲೇಔಟ್ ನಲ್ಲಿನ ಯುವತಿಯ ಮೇಲಿನ ದೌರ್ಜನ್ಯ ಘಟನೆಯ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬೇಜವಾಬ್ದಾರಿ ಹೇಳಿಕೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದನ್ನು ಸ್ವತಃ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿನ ಯುವತಿಯ ಮೇಲಿನ ದೌರ್ಜನ್ಯ ಘಟನೆಯ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬೇಜವಾಬ್ದಾರಿ ಹೇಳಿಕೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದನ್ನು ಸ್ವತಃ ಒಪ್ಪಿಕೊಂಡಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಕೊಲೆ, ಸುಲಿಗೆ, ದರೋಡೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಸರಣಿ ರೂಪದಲ್ಲಿ ವರದಿಯಾಗುತ್ತಲೇ ಇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುವುದರಲ್ಲಿ ವಿಶೇಷತೆ ಏನು ಇಲ್ಲ, ಅದನ್ನು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆಯಿಲ್ಲ ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಆಡಳಿತ ಸಾಗಿದೆ. ನಡು ರಸ್ತೆಯಲ್ಲಿ ಹೆಣ್ಣು ಮಗಳೊಬ್ಬಳಿಗೆ ಕಿರಾತಕರು ನೀಡುವ ಕಿರುಕುಳವನ್ನು ಮಾಮೂಲಿ ಘಟನೆ ಎಂಬ ರೀತಿಯಲ್ಲಿ ಹೇಳಿರುವ ಗೃಹ ಸಚಿವರ ಮಾತುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆಯನ್ನು ಕುಗ್ಗಿಸುವ ನಡೆಯಾಗಿದೆ. ಗೃಹ ಸಚಿವರ ಈ ಮಾತುಗಳು ಅವರ ಅಸಮರ್ಥತೆ ಮಾತುಗಳನ್ನು ಪ್ರತಿಬಿಂಬಿಸಿದೆ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಗಂಭೀರ ಘಟನೆಗಳು ನಡೆದಾಗಲೆಲ್ಲ ಸಹಜ ಎಂಬಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಕೈ ತೊಳೆದುಕೊಳ್ಳುವ ಗೃಹ ಸಚಿವರು ಬಿಟಿಎಂ ಲೇಔಟ್‌ನ ಘಟನೆಯನ್ನು ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿರುವುದು ನಿಜಕ್ಕೂ ದುರ್ದೈವದ ಸಂಗತಿ. ರಾಜ್ಯದ ಮುಖ್ಯಮಂತ್ರಿಗಳು ಈ ಸಂಬಂಧ ರಾಜ್ಯದ ಕಾನೂನು ವ್ಯವಸ್ಥೆಯ ವೈಫಲ್ಯದ ಕುರಿತು ತಮ್ಮ ನೈತಿಕ ಜವಾಬ್ದಾರಿಯ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಕಾನೂನು ಸುವ್ಯವಸ್ಥೆ ಸಮರ್ಥವಾಗಿ ನಿಭಾಯಿಸುವಲ್ಲಿ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗುವವರೆಗೂ ರಾಜ್ಯದ ಜನರಿಗೆ ನೆಮ್ಮದಿ ಇಲ್ಲ ಎನ್ನುವುದು ಗೃಹ ಸಚಿವರ ಹೇಳಿಕೆಯಿಂದ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





