ಬೆಂಗಳೂರು: ಲೇಸರ್ ಔಷಧ ಮತ್ತು ಶಸ್ತ್ರ ಚಿಕಿತ್ಸೆಯ ಪ್ರಗತಿಗೆ ರಾಜ್ಯವು ಪ್ರಮುಖ ವೇದಿಕೆಯಾಗಿದೆ. ಉದ್ಯಮಿಗಳು ವೈದ್ಯಕೀಯ ವಲಯದ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದ ಹೊರವಲಯದ ವೈಟ್‌ಫೀಲ್ಡ್‌ನಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಲೇಸರ್ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಾ ಸಮಾವೇಶವನ್ನು ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವು ವೈದ್ಯಕೀಯ ಅವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ. 350ಕ್ಕೂ ಹೆಚ್ಚು ಅಗತ್ಯ ವೈದ್ಯಕೀಯ ಸಾಧನಗಳನ್ನು ತಯಾರಿಸುತ್ತಿದೆ. ನೂರಾರು ಔಷಧ ಕಂಪನಿಗಳಿಗೆ ಅತಿಥ್ಯವಹಿಸುತ್ತಿದೆ. ʼಕ್ವೀನ್ ಸಿಟಿʼ ಯೋಜನೆ ಸೇರಿದಂತೆ ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ವೈದ್ಯಕೀಯ ಚಿಕಿತ್ಸಾ ವಲಯಗಳಲ್ಲಿ ಉದ್ಯಮಿಗಳು ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ದೇಶದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.25 ರಷ್ಟಿದೆ. ಜೊತೆಗೆ ದೇಶದ ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಶೇ.60 ರಷ್ಟು ನಮ್ಮಲ್ಲೇ ಇದೆ. ದೇಶದ ಔಷಧ ರಫ್ತು ವಹಿವಾಟಿನಲ್ಲಿ ನಮ್ಮ ಪಾಲು ಶೇ.40 ರಷ್ಟಿದೆ ಎಂದು ವಿವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಡಾ.ಅರುಣ್ ಇನಾಂದಾರ್, ಡಾ.ಬಿ.ಎಸ್.ಚಂದ್ರಶೇಖರ್, ಸೊಲ್ಲಾಪುರದ ಸ್ವಪ್ನಿಲ್ ಶಾ, ಹೈದರಾಬಾದ್‌ನ ಸಂಜೀವ್ ಸೇರಿದಂತೆ ಇತರರು ಇದ್ದರು.





