ಮಂಗಳೂರು: ಈ ವರ್ಷದಿಂದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕ್ರೀಡಾಕೂಟದಲ್ಲೂ ಕಂಬಳವನ್ನು ಸೇರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಏರ್ಪಡಿಸಿದ್ದ ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಂಬಳವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರ ನೀಡಲಾಗುತ್ತದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಕಂಬಳ ನಡೆದಿದೆ. ಕಂಬಳ ಕ್ರೀಡೆಗೆ ಶಾಶ್ವತವಾಗಿ ಪ್ರೋತ್ಸಾಹ ನೀಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ.
ಈ ಹಿನ್ನೆಲೆಯಲ್ಲಿ ಕಂಬಳದ ಕೋಣಗಳನ್ನು ಸಾಕಿ, ಅದರೊಂದಿಗೆ ತೋರಿಸುವ ಪ್ರೀತಿ ಅನನ್ಯವಾದದ್ದು, ಜನಪದ ಸಂಸ್ಕೃತಿ ಉಳಿಸಲು ಸರ್ಕಾರ ಸದಾ ನೆರವು ನೀಡಲಿದೆ ಎಂದರು.
ಇನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕ್ರೀಡಾಕೂಟದಲ್ಲೂ ಕಂಬಳ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.





