ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಮಾಗಡಿ ತಾಲ್ಲೂಕಿನ ವಾಜರಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ ಹಾಗೂ ಬಂಧಿತರನ್ನು ಸುದೀಪ್, ಪ್ರಜ್ವಲ್ ಎಂದು ಗುರುತಿಸಲಾಗಿದೆ. ಮೂವರು ಮಾಗಡಿ ತಾಲ್ಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ.
ಘಟನೆ ಹಿನ್ನೆಲೆ: ಜನವರಿ.1ರಂದು ಹೊಸ ವರ್ಷಾಚರಣೆಗಾಗಿ ಐವರು ಸ್ನೇಹಿತರು ಪಾರ್ಟಿ ಮಾಡಲು ತೀರ್ಮಾನಿಸಿದ್ದರು. ನಂತರ ಮದ್ಯಕ್ಕೆ ಎಳನೀರು ಬೆರೆಸುವ ಐಡಿಯಾ ಮಾಡಿದ ಸ್ನೇಹಿತರು ತೆಂಗಿನ ಮರ ಹತ್ತುವಂತೆ ವಿನೋದ್ ಕುಮಾರ್‌ನನ್ನು ಒತ್ತಾಯ ಮಾಡಿದ್ದರು. ವಿನೋದ್ ಕುಮಾರ್ ತೆಂಗಿನ ಮರ ಹತ್ತಿದ್ದನು. ಬಳಿಕ ಕಾಲು ಜಾರಿ ಮರದಿಂದ ಬಿದ್ದು ಬೆನ್ನುಮೂಳೆ ಮುರಿದುಕೊಂಡು ನೋವಿನಿಂದ ನರಳಾಡಿದ್ದಾನೆ. ಇದರಿಂದ ಭಯಗೊಂಡ ಆರೋಪಿಗಳು ವಿನೋದ್‌ನನ್ನು ಕೆರೆಯ ಬಳಿ ಕರೆದುಕೊಂಡು ಹೋಗಿ ಮುಳುಗಿಸಿ ಕೊಂದಿದ್ದಾರೆ.
ಮಗ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಿಗೆ ಬಂದಿದೆ. ಪ್ರಕರಣ ಸಂಬಂಧ ಸುದೀಪ್ ಹಾಗೂ ಪ್ರಜ್ವಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.





