ಬೆಂಗಳೂರು: ರಾಜ್ಯದ ಶಕ್ತಿ ಯೋಜನೆಗಳನನು ಡಯಾಲಿಸಿಸ್ ಒಳಗಾಗಿರುವ ಗಂಡಸರಿಗೂ ವಿಸ್ತರಿಸುವಂತೆ ಕೂಗು ಕೇಳಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸ್ಫೀಕರ್ ಯು.ಟಿ.ಖಾದರ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದ ಶಕ್ತಿ ಯೋಜನೆ, ಗಂಡಸರಿಗೂ ವಿಸ್ತರಿಸುವಂತೆ ಬೇಡಿಕೆ ಪದೇ ಪದೇ ಬರುತ್ತಿದೆ. ಅದರಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಖುದ್ದು ಯು.ಟಿ.ಖಾದರ್ ಅವರೇ ಪತ್ರ ಬರೆದು ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಿತ್ಯ ಪುರುಷರು ಸಾರಿಗೆ ಬಸ್ ಬಳಕೆ ಮಾಡುತ್ತಾರೆ. ಇದರಲ್ಲಿ ಅನೇಕ ಕಾಯಿಲೆ ಇರುವ ಪುರುಷ ಪ್ರಯಾಣಿಕರು ಕೂಡ ಸಂಚಾರ ಮಾಡುತ್ತಾರೆ. ಈ ಪೈಕಿ ಡಯಾಲಿಸಿಸ್‌ಗೆ ಒಳಗಾಗಿರುವ ಪುರುಷ ಪ್ರಯಾಣಿಕರನ್ನು ಶಕ್ತಿ ಯೋಜನೆಗೆ ತರುವಂತೆ ಮನವಿ ಮಾಡಲಾಗಿದೆ.
ವಾರಕ್ಕೆ 2-3 ಬಾರಿ ಡಯಾಲಿಸಿಸ್‌ಗೆ ಪುರುಷ ರೋಗಿಗಳು ಸಂಚಾರ ಮಾಡುವುದರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಅಂತಹವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಶಕ್ತಿ ಯೋಜನೆ ವ್ಯಾಪ್ತಿಗೆ ತರಬೇಕೆಂದು ಒತ್ತಾಯ ಕೇಳಿಬಂದಿದೆ.





