ಬೆಂಗಳೂರು : ಬಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು, ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಮೊದಲಿಗೆ ಆರ್‌ಟಿ ನಗರದದಲ್ಲಿರುವ ಬೊಮ್ಮಾಯಿ ಅವರ ಮನೆಗೆ ತೆರಳಿ ಭೇಟಿ ಮಾಡಿ, ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 15 ರಂದು ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತೇನೆ. ಚುನಾವಣಾ ಕಾರ್ಯದಲ್ಲಿ ಪ್ರಧಾನಿ ಮೋದಿ ಹಾಗೂ ಜೆಪಿ ನಡ್ಡಾ ನಿರತರಾಗಿದ್ದಾರೆ. ಹಾಗಾಗಿ ನ.23ರಂದು ದೆಹಲಿಗೆ ತೆರಳಿ ವಿರೋಧ ಪಕ್ಷದ ನಾಯಕರ ಆಯ್ಕೆ ಕುರಿತು ಚರ್ಚೆ ಮಾಡುತ್ತೇನೆಂದು ತಿಳಿಸಿದರು.
ಇದರ ಬೆನ್ನಲ್ಲೇ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ದೀಪಾವಳಿ ಶುಭಾಷಯ ಕೋರಿ, ಆಶೀರ್ವಾದ ಪಡೆದಿದ್ದೇನೆ ಎಂದರು. ದೊಡ್ಡ ರಾಷ್ಟ್ರೀಯ ಪಕ್ಷವೊಂದು ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿ ಕೊಟ್ಟಿರುವ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ರೀತಿಯಲ್ಲಿ ಪಕ್ಷ ಸಂಘಟನೆಗೆ ಶ್ರಮ ವಹಿಸಿ ಯಶಸ್ವಿಯಾಗುವಂತೆ ಹರಸಿದ್ದಾರೆ. ಅವರ ಭೇಟಿಯಿಂದ ನನಗೆ ಸಂತೋಷವಾಗಿದೆ. ಅವರ ಚಿಂತನೆಗಳು ನಮಗೆ ಶಕ್ತಿ ನೀಡುತ್ತವೆ. ರಾಜ್ಯದಲ್ಲಿ ಹೋರಾಟ ಎಂಬ ಮಾತು ಬಂದಾಗ ದೇವೇಗೌಡರು ಹಾಗೂ ಯಡಿಯೂರಪ್ಪ ಅವರು ನೆನಪಾಗುತ್ತಾರೆ ಎಂದು ಸ್ಮರಿಸಿದರು.
ಪಕ್ಷ ಹಿತದೃಷ್ಠಿಯಿಂದ ಜೆಡಿಎಸ್ ವರಿಷ್ಠರು ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರ ಸಲಹೆಗಳನ್ನು ಸ್ವೀಕರಿಸುತ್ತೇವೆ ಎಂದರು.