ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದ್ದು, ಆಹಾರ ಸುರಕ್ಷತಾ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ವಿಲೀನಗೊಳಿಸಿದೆ.
ಈಗ ಎರಡು ಇಲಾಖೆಯನ್ನು ವಿಲೀನಗೊಳಿಸಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಎಂದು ಹೊಸ ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಆರೋಗ್ಯ ಸೇವೆಗಾಗಿ, ಹೆಚ್ಚಿನ ಚಿಕಿತ್ಸಾ ವೆಚ್ಚ ಇರುವ ಕಾಯಿಲೆಗಳಿಗೆ ಹಾಗೂ ವಿರಳ ಆರೋಗ್ಯ ಸೇವೆ ಒದಗಿಸಲು ಕಾರ್ಫಸ್ ಫಂಡ್ ಮೀಸಲಿಟ್ಟಿದೆ. ಇದಕ್ಕಾಗಿ ಸರ್ಕಾರ ಒಟ್ಟು 45 ಕೋಟಿಯನ್ನು ಮೀಸಲಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನನು ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಬೆಳಗಾವಿಯ ಕುಂದಾನಗರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಆರು ತಿಂಗಳಿನಲ್ಲಿಯೇ 322 ಶಿಶುಗಳು ಮತ್ತು 29 ಬಾಣಂತಿಯರು ಮೃತಪಟ್ಟಿದ್ದಾರೆ. ಅಲ್ಲದೇ ರಾಯಚೂರಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಭಾರೀ ಸುಧಾರಣೆ ತರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆ ಸಂಬಂಧ ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.





