ಮೈಸೂರು: ರಾಜ್ಯದ ವಿವಿದೆಡೆ ಕಳೆದೆರಡು ವಾರಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆ ಮುಂದಿನ ವಾರವು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು(ಮೇ.19) ಮೈಸೂರಿಗೆ ಬೆಳಗ್ಗೆಯಿಂದಲೇ ಮಳೆಯ ಸಿಂಚವಾಗಿದೆ. ನಗರದಲ್ಲಿ ತುಂತುರು ಮಳೆ ಬರುವುದು ನಿಲ್ಲುವುದು ಮಾಡುತ್ತಿದೆ. ಹೀಗಾಗಿ ಸದ್ಯ ಮೈಸೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಮುಂದಿನ ಐದು ದಿನಗಳ ಕಾಲ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೈಸೂರು ನಗರದ ಕುವೆಂಪುನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ, ಗಂಗೋತ್ರಿ, ಒಂಟಿಕೊಪ್ಪಲ್, ಮಂಡಿ ಮೊಹಲ್ಲಾ, ಎನ್ ಆರ್ ಮೊಹಲ್ಲಾ, ಕೆ.ಆರ್ ಸರ್ಕಲ್, ಅಗ್ರಹಾರ ಸೇರಿದಂತೆ ಹಲವೆಡೆ ಬೆಳಿಗ್ಗೆಯೇ ಧಾರಾಕಾರ ಮಳೆಯಾಗಿದೆ. ಅಲ್ಲದೇ ಸಂಜೆಯೂ ಸಹ ಸಾಧಾರಣ ಮಳೆಯಾಗಿದೆ. ಇವತ್ತು ಭಾನುವಾರ ಎಂದು ಸುತ್ತಾಡುತ್ತಿದ್ದವರಿಗೆ ಮಳೆಯ ಸಿಂಚನವಾಗಿದೆ. ಮಳೆಯಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದು, ಅಲ್ಲಲ್ಲಿ ವಾಹನದಟ್ಟನೆ ಕಂಡುಬಂತು.
ಇನ್ನೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಇಂದು ಬೆಳಿಗ್ಗೆಯಿಂದಲೇ ಮಳೆಯಾಗಿದೆ. ಕೊಡಗಿನಲ್ಲಿ ಭರ್ಜರಿ ಮಳೆಯಾಗಿದ್ದು, ಚಾಮರಾಜನಗರದ ಕೋಳ್ಳೆಗಾಲದಲ್ಲಿ ಸಾಧಾರಣ ಮಳೆಯಾಗಿದೆ.
ಐದು ದಿನ ಅಲರ್ಟ್:
ವಾಯುಭಾರ ಕುಸಿತ ಉಂಟಾಗಿರುವ ಹಿನ್ನಲೆ ಇಂದಿನಿಂದ ಐದು ದಿನ ೧೭ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ. ಇನ್ನು ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.





