ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲು ಅವಕಾಶ ಕೊಡುವುದಿಲ್ಲ. ಎಲ್ಲಾ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ಕನ್ನಡಿಗರಿಗೆ ನಿವೇಶನ ಸಿಗಬೇಕು. ಅದನ್ನು ಹೊರತುಪಡಿಸಿ ಬೇರೆ ರಾಜ್ಯಗಳಿಂದ ಇಲ್ಲವೇ ಹೊರ ದೇಶದಿಂದ ಬಂದವರಿಗೆ ನಿವೇಶನ ಕೊಟ್ಟರೆ ನಾವು ಸುಮ್ಮನಿರಬೇಕೇ? ಎಂದು ಪ್ರಶ್ನೆ ಮಾಡಿದರು.
ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಇದನ್ನು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯದ ತೆರಿಗೆದಾರರ ಹಣದಲ್ಲಿ ಕಟ್ಟಿರುವ ಮನೆಗಳನ್ನು ಅಕ್ರಮ ವಲಸಿಗರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೋ ಅಥವಾ ವೇಣುಗೋಪಾಲ್ ಅವರೋ ಎಂದು ಪ್ರಶ್ನೆ ಮಾಡಿದ ವಿಜಯೇಂದ್ರ, ಸಿಎಂಗೆ ಕುರ್ಚಿ ಉಳಿಸಿಕೊಳ್ಳುವ ಇರಾದೆ. ಡಿಸಿಎಂ ಡಿಕೆಶಿಗೆ ಕುರ್ಚಿ ಕಿತ್ತುಕೊಳ್ಳುವ ಆಸೆ. ಹೀಗಾಗಿ ನಿಜವಾದ ಸ್ಥಳೀಯರು ಈ ಸರ್ಕಾರದಲ್ಲಿ ಅನಾಥರಾಗಿದ್ದಾರೆ ಎಂದು ಕಿಡಿಕಾರಿದರು.





