ಹಾವೇರಿ : ರಾಜ್ಯದಲ್ಲಿ ಒಂದು ತಿಂಗಳಿಂದ ಡೆಂಗ್ಯೂ ಜ್ವರದ ಕಾಟ ಒಂದು ಕಡೆಯಾದ್ರೆ , ಡೆಂಗ್ಯೂ ಜೊತೆಗೆ ಇಲಿ ಜ್ವರ ಮತ್ತಷ್ಟು ಆತಂಕವನ್ನುಂಟು ಮಾಡುತ್ತಿದೆ . ಇಲಿ ಜ್ವರ ಹಾಗೂ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಾವೇರಿಯ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಿನ್ನೆಯಷ್ಟೆ ೧೨ ವರ್ಷದ ಬಾಲಕನಲ್ಲಿ ಈ ಇಲಿ ಜ್ವರ ಕಂಡುಬಂದಿತ್ತು. ಇದೀಗ ಹಾವೇರಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಉಮೇಶ್ ಎಂಬ ವೃದ್ಧ ಕಳೆದ ೧೫ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು ಹಾವೇರಿ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ ನಡೆಸಿದಾಗ ಇಲಿ ಜ್ವರ ಇರುವುದು ದೃಢವಾಗಿದೆ. ಇಲಿ ಜ್ವರದ ಜೊತೆಗೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ಇಲಿ ಜ್ವರದಿಂದ ವೃದ್ಧ ಸಾವನ್ನಪ್ಪಿರುವುದಕ್ಕೆ ಹಾವೇರಿ ಜಿಲ್ಲೆಯಾದ್ಯಂತ ಜನರಲ್ಲಿ ಆತಂಕ ಶುರುವಾಗಿದೆ.