ವಿಜಯನಗರ: ಬಳ್ಳಾರಿ ಸಮೀಪದಲ್ಲಿರುವ ತುಂಗಭದ್ರಾ ಅಣೆಕಟ್ಟೆಯು ಭರ್ತಿಯತ್ತ ಸಾಗಿದ್ದು, 10 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹೊರಬಿಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ಕಟ್ಟಾಗಿ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಪೋಲಾಗಿತ್ತು.
ಈ ಹಿನ್ನೆಲೆಯಲ್ಲಿ ಭಾರೀ ಆತಂಕಗೊಂಡಿದ್ದ ಆ ಭಾಗದ ರೈತರು ಈ ವರ್ಷ ಒಂದು ಬೆಳೆಯನ್ನೂ ಬೆಳೆಯಲು ಆಗಲ್ಲ ಎಂದು ಬೇಸರದಿಂದಲೇ ದಿನದೂಡುತ್ತಿದ್ದರು.
ಹೀಗಿರುವಾಗಲೇ ಕಳೆದ ಮೂರು ದಿನಗಳಿಂದ ಮಳೆರಾಯ ತನ್ನ ಅಬ್ಬರ ಶುರು ಮಾಡಿದ್ದು, ತುಂಗಭದ್ರಾ ಜಲಾಶಯ ಭರ್ತಿಯತ್ತ ಸಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಒಂದೊಂದೇ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲು ಆರಂಭಿಸಲಾಯಿತು.
ಮೊದಲಿಗೆ 5 ಗೇಟ್‌ಗಳನ್ನು ತೆರೆದು ನೀರನ್ನು ಹರಿಸಲಾಯಿತು. ಬಳಿಕ ಮತ್ತೆ ಐದು ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗಿದೆ.
ಜಲಾಶಯದಿಂದ ಒಟ್ಟಾರೆ ಈಗ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ಮಳೆ ಜಾಸ್ತಿಯಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದರೆ, ಮತ್ತೆ ಹೊರಹರಿವನ್ನು ಹೆಚ್ಚಳ ಮಾಡುತ್ತೇವೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.