ಆಂಧ್ರಪ್ರದೇಶ: ಆಂಧ್ರಪ್ರದೇಶದ ಹಿಂದೂಪುರದಲ್ಲಿ ರೈತ ಸಂಘಟನೆಗಳು ಮತ್ತು ರೈತರೊಂದಿಗೆ ಎಸ್‌ಕೆಎಂ ಸಭೆ ನಡೆಸಿತು.
ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೇವಾಲ್ ಮಾತನಾಡಿ, ಇಡೀ ದೇಶದ ರೈತರು ತಮ್ಮ ಹಕ್ಕುಗಳಿಗಾಗಿ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ಕಿಸಾನ್ ಆಂದೋಲನ-2ನ್ನು ಬಲಪಡಿಸಲು ಮೋರ್ಚಾ ನೀಡುವ ಎಲ್ಲಾ ಕಾರ್ಯಕ್ರಮಗಳನ್ನು ಆಂಧ್ರಪ್ರದೇಶದಲ್ಲೂ ರೈತರು ಒಗ್ಗಟ್ಟಿನಿಂದ ನಡೆಸಬೇಕು. ನಿನ್ನೆ ಬೆಂಗಳೂರಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರಾಜಕೀಯೇತರ ನಿಯೋಗವು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಮತ್ತು ಕೃಷಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಪ್ರೊ.ಪ್ರಕಾಶ್ ಕಮರೆಡ್ಡಿ ಅವರೊಂದಿಗೆ ಎಂಎಸ್‌ಪಿ ಖಾತರಿ ಕಾಯ್ದೆಯ ವಿಷಯದ ಕುರಿತು ವಿವರವಾದ ಚರ್ಚೆಯನ್ನು ನಡೆಸಿತು ಎಂದರು.
ಮುಂದುವರಿದು ಮಾತನಾಡಿದ ಅವರು, ಫೆಬ್ರವರಿ.13ರಿಂದ ನಾಲ್ಕು ಸ್ಥಳಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯ್ದೆಗಾಗಿ ನಮ್ಮ ಪ್ರತಿಭಟನೆ ನಡೆಯುತ್ತಿದೆ. ಹಾಗೂ ಸಾವಿರಾರು ರೈತರು 136 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಗಳಲ್ಲಿ ಧರಣಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ ರೈತರ ವಿರೋಧ ಎದುರಿಸಬೇಕಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಎಲ್ಲಾ ರಾಜ್ಯಗಳ ರೈತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದರು.
ಬಳಿಕ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ಜುಲೈ.8ರಂದು ಎಸ್‌ಕೆಎಂ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು 240 ಬಿಜೆಪಿಯ ಸಂಸದರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಪಕ್ಷಗಳ ಸಂಸದರಿಗೆ ಜ್ಞಾಪಕ ಪತ್ರ ನೀಡಲಿದ್ದಾರೆ.
ಜುಲೈ ತಿಂಗಳಿನಲ್ಲಿ ಉಭಯ ಮೋರ್ಚಾಗಳಿಂದ ದೆಹಲಿಯಲ್ಲಿ ರೈತ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಸೆಪ್ಟೆಂಬರ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ರಾಜಕಿಯೇತರ ಮತ್ತು ಕಿಸಾನ್ ಮುಜ್ದೂರ್ ಮೋರ್ಚಾ ನೀಡುವ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುವುದಾಗಿ ಮಾಹಿತಿ ನೀಡಿದರು.