ಬೆಂಗಳೂರು : ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ ಗರಂ ಆಗಿ ಜಿಲ್ಲಾಧಿಕಾರಿಗಳಿಂದ ವರದಿ ಪಡೆದರು.
ಶುಕ್ರವಾರ ವಿಧಾನಸೌಭದ ಕೊಠಡಿಯಲ್ಲಿ ಎಲ್ಲಾ ಜಿಲ್ಲೆಗಳ ಡಿಸಿ, ಎಸ್.ಪಿ ಹಾಗೂ ಸಿಇಒಗಳ ಜೊತೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಅವರು, ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ಆದಷ್ಟು ಬೇಗ ಬಗೆಹರಿಸಿ ಪರಿಹಾರ ಒದಗಿಸಿ ಎನ್ನುವ ಸೂಚನೆ ನೀಡಿದರು.
ಭೂಕುಸಿತ: ತಕ್ಷಣ ತೆರಳುವಂತೆ ಸೂಚಿನೆ
ರಾತ್ರಿ ಬಿದ್ದ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ, ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ಮುಖ್ಯಮಂತ್ರಿಗಳು, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ದ.ಕ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅನರ್ಹ ಪಡಿತರ ಚೀಟಿಗಳು ಇನ್ನೂ ಹೇಗೆ ಉಳಿದುಕೊಂಡಿವೆ: ಸಿ.ಎಂ ಪ್ರಶ್ನೆ
ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ. 74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಪ್ರಶ್ನಿಸಿದರು.





