ಬೆಂಗಳೂರು: ಖ್ಯಾತ ಜನಪದ ಗಾಯಕ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ ಆಲೂರು ನಾಗಪ್ಪ ಅವರು ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಆಲೂ ರು ನಾಗಪ್ಪ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗಪ್ಪ ವಿಧಿವಶರಾಗಿದ್ದು, ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಆಲೂರು ನಾಗಪ್ಪ ಅವರು ಸಾವಿರಾರು ಲಾವಣಿ ಹಾಗೂ ತತ್ವಪದಗಳ ಹರಿಕಾರ. ಇವರಿಗೆ ಜಾನಪದ ಹಾಗೂ ಸಂಗೀತದ ಮೇಲೆ ಇದ್ದ ಪ್ರೀತಿ ಅಷ್ಟಿಷ್ಟಲ್ಲ.
ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಆಲೂರು ನಾಗಪ್ಪ ಅವರು, ಕನ್ನಡದ ಏಳಿಗೆಗಾಗಿ ಶ್ರಮ ವಹಿಸಿ ದುಡಿದಿದ್ದಾರೆ.
ನಿಂಗವ್ವ ಬೆಂಗಳೂರಿಗೆ ಬಂದು ನೋಡವ್ವ ಹಾಡಿನ ಖ್ಯಾತಿಯ ಆಲೂರು ನಾಗಪ್ಪ ಅವರು, ಸಾವಿರಾರು ಲಾವಣಿ, ತತ್ವಪದಗಳನ್ನು ರಚಿಸಿದ್ದಾರೆ.
ಆಲೂರು ನಾಗಪ್ಪ ಅವರ ನಿಧನಕ್ಕೆ ಗಣ್ಯಾತಿಗಣ್ಯರು ಹಾಗೂ ಸಾಹಿತಿಗಳು ಸಂತಾಪ ಸೂಚಿಸಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇನ್ನೂ ಆಲೂರು ನಾಗಪ್ಪ ಅವರ ಅಂತ್ಯಸಂಸ್ಕಾರ ಬಿಡದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.





