ಬೆಂಗಳೂರು: ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ಎರಡು ವರ್ಷಗಳಲ್ಲಿ ಹರಿಸಿದರೆ ಡಿಕೆಶಿ ಅವರನ್ನು ಭಗೀರಥ ಎಂದು ನಾನೇ ಘೋಷಿಸುವೆ ಎಂಬ ಸಂಸದ ಸುಧಾಕರ್ ಸವಾಲನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವೀಕರಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದು ನನ್ನ ಜವಾಬ್ದಾರಿ ಹಾಗೂ ಸಲಹೆ ಎಂದು ಭಾವಿಸುತ್ತೇನೆ. ಎತ್ತಿನಹೊಳೆ ಭೂಮಿ ಪೂಜೆಯಲ್ಲಿ ಅವರೂ ಇದ್ದರು. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ನೀರು ದೊರೆಯಲಿ ಎಂಬುದು ಅವರ ಆಸೆ. ಅವರ ಆಸೆ ಈಡೇರಿಸುವ ಕೆಲಸ ಮಾಡೋಣ ಎಂದರು.
ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರು ತರಬೇಕು ಎಂದು ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಸುಬ್ಬಾರೆಡ್ಡಿ, ಶಿವಶಂಕರ್ ರೆಡ್ಡಿ, ರಮೇಶ್ ಕುಮಾರ್, ಸುಧಾಕರ್ ಸೇರಿದಂತೆ ಹಲವರು ಹೋರಾಟ ಮಾಡಿದ್ದಾರೆ. ಕೋಲಾರ ಭಾಗದ ಜನರ ನೀರಿನ ಸಂಕಷ್ಟ ನನಗೆ ಅರಿವಿದೆ. ಹಾಗಾಗಿ ಅಲ್ಲಿಗೂ ಕೂಡ ನೀರು ತರುತ್ತೇವೆ ಎಂದು ಆಶ್ವಾಸನೆ ನೀಡಿದರು.