Mysore
28
clear sky

Social Media

ಮಂಗಳವಾರ, 20 ಜನವರಿ 2026
Light
Dark

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ್‌ ಖಂಡ್ರೆ ಆಯ್ಕೆ

Eshwara Khandre

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ತಿಳಿಸಿದರು.

ಬೆಂಗಳೂರಿನಲ್ಲಿಂದು ನಡೆದ ಸಭಾದ ಕಾರ್ಯಕಾರಿಣಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸಭಾದ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರ ಬಿ ಖಂಡ್ರೆ ಅವರನ್ನು ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು ಎಂದರು.

ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈಶ್ವರ ಬಿ ಖಂಡ್ರೆ ಅವರನ್ನು ಆಯ್ಕೆ ಮಾಡಲು ಎಲ್ಲ ಸದಸ್ಯರೂ ಒಮ್ಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು.

ಕಳೆದ 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರ ಬಿ ಖಂಡ್ರೆ ಅವರು ಕಳೆದ ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು.

ತಮ್ಮ ಪೂಜ್ಯ ತಂದೆ ಭೀಮಣ್ಣ ಖಂಡ್ರೆಯವರ ಮಾರ್ಗದಲ್ಲೇ ನಡೆದು, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಈಶ್ವರ ಬಿ ಖಂಡ್ರೆ ಈಗ ಮಹಾಸಭಾದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಮಾಜಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

ತಮ್ಮನ್ನು ಮಹಾಸಭಾದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿಗೆ ಧನ್ಯವಾದ ಅರ್ಪಿಸಿದ ಅವರು, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ತಾವು ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈ ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದ್ದು ಎಂದು ತಿಳಿಸಿದ ಅವರು, ನಮ್ಮ ಸಮಾಜದಲ್ಲೂ ಶೇ.40ರಿಂದ 50ರಷ್ಟು ಬಡವರಿದ್ದು, ಶೇ.30ಕ್ಕಿಂತ ಹೆಚ್ಚು ಜನರು ತೀವ್ರ ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಹೀಗಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲು ಸಭಾ ವತಿಯಿಂದ ನೂತನ ಅಧ್ಯಕ್ಷನಾಗಿ ಶ್ರಮಿಸುವುದಾಗಿ ಹೇಳಿದರು.

Tags:
error: Content is protected !!