Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪರಿಸರ ಹಾನಿ ಪಟಾಕಿಗಿಲ್ಲ ಅವಕಾಶ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದ್ದು, ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಪ್ರಸಕ್ತ ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತು ಜಿಲ್ಲಾಧಿಕಾರಿ ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ 1ರಿಂದ 25ರ ವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 ಮಿ.ಮೀ ಆಗಿದ್ದು, ಶೇ.58 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಸೆಪ್ಟಂಬರ್‌ 30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮೀ ಆಗಿದ್ದು, ಈ ಬಾರಿ 978 ಮಿ.ಮೀ ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲೂ ಶೇ.15ರಷ್ಟು ಹೆಚ್ಚುವರಿ ಮಳೆಯಾಗಿತ್ತು ಎಂದು ಮಾಹಿತಿ ನೀಡಿದರು.

ರಾಜಕಾಲುವೆ ತೆರವು; ಆದ್ಯತೆ ಮೇಲೆ ಕೈಗೊಳ್ಳಿ
ಬೆಂಗಳೂರು ನಗರದಲ್ಲಿ ಈ ವರ್ಷ ಅಕ್ಟೋಬರ್‌ ತಿಂಗಳಲ್ಲಿ 275ಮಿಮೀ ಮಳೆಯಾಗಿದ್ದು, ಇದು 3ನೇ ಅತಿ ಹೆಚ್ಚು ಮಳೆಯಾಗಿದೆ. 2005ರಲ್ಲಿ ಈ ಅವಧಿಯಲ್ಲಿ 407 ಮೀಮೀ ಮಳೆಯಾಗಿತ್ತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಾಜಕಾಲುವೆ ಒತ್ತುವರಿ ತೆರವು, ತಡೆಗೋಡೆ ನಿರ್ಮಾಣ ಕುರಿತು ಆದೇಶ ನೀಡಿದ್ದೆ. ಆದರೆ ಈ ಕಾರ್ಯ ಇನ್ನೂ ಪೂರ್ಣಗೊಳಿಸದ ಕಾರಣ ಪ್ರತಿ ವರ್ಷ ಮಳೆ ಬಂದ ತಕ್ಷಣ ಅನಾಹುತಗಳು ಸಂಭವಿಸುತ್ತಿವೆ. ರಾಜಕಾಲುವೆಗಳ ಅತಿಕ್ರಮಣ ತೆರವು ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಜಕಾಲುವೆ ತಡೆಗೋಡೆ ಯೋಜನೆಗೆ ವಿಶ್ವಬ್ಯಾಂಕ್‌ ತಾತ್ವಿಕ ಒಪ್ಪಿಗೆ
ವಿಶ್ವಬ್ಯಾಂಕ್‌ ಸಂಸ್ಥೆಯು ಬೆಂಗಳೂರು ನಗರದಲ್ಲಿ ಬಾಕಿ ಉಳಿದಿರುವ 173 ಕಿಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವ ಯೋಜನೆಗೆ ಹಾಗೂ 80 ಕಿಮೀ ಉದ್ದದ ಕಲ್ಲುಕಟ್ಟಡದ ರಾಜಕಾಲುವೆಗಳ ಸಬಲೀಕರಣ ಯೋಜನೆಗೆ ರೂ.2ಸಾವಿರ ಕೋಟಿ ಆರ್ಥಿಕ ನೆರವು ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿಯ ಅಂದಾಜು ಪಟ್ಟಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಮುಂದಿನ ವರ್ಷದ ಆರಂಭದ ಒಳಗಾಗಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.

NDMF ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ 175 ಕೋಟಿ ಕೆರೆಗಳ ಅಭಿವೃದ್ಧಿಗೆ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಿ. ತೂಬು ಕಾಲುವೆಗೆ 85 ಕೋಟಿ, ಬೆಂಗಳೂರು ನಗರ ರಸ್ತೆ ನಿರ್ಮಾಣಕ್ಕಾಗಿ 165 ಕೋಟಿ ಪ್ರಸ್ತಾವನೆ ಸಿದ್ಧಪಡಿಸಿ. ಈಗ 14 ಸಾವಿರ ಗುಂಡಿ ಮುಚ್ಚಿದ್ದೀವಿ. ಮುಚ್ಚಿದ ಬಳಿಕ ಮತ್ತಷ್ಟು ಮಳೆ ಬಂದಿದ್ದರಿಂದ ಮತ್ತೆ ಗುಂಡಿ ಮುಚ್ಚಿವೆ. ಇವನ್ನೂ ಆದಷ್ಟು ಬೇಗ ಮುಚ್ಚಿ ಎಂದು ನಿರ್ದೇಶಿಸಿದರು.

ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತಡೆಗಟ್ಟಲು ಹೊಸ ಕಠಿಣ ಕಾನೂನು ತಂದು BBMP, bda, bmrda ಗೆ ಹೆಚ್ಚು ಅಧಿಕಾರ ನೀಡಲು ನಿರ್ಧರಿಸಲಾಗುವುದು. ಅಕ್ರಮ ನಿರ್ಮಾಣ, ಇದರಿಂದ ಆಗುವ ಅನಾಹುತ ತಡೆಯಲು ಕಾನೂನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

 

Tags: