ಬೆಂಗಳೂರು: ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ಮತ್ತು ಹಳ್ಳಿಗಳಲ್ಲೂ ಇವೆ. ಈಗ ಇವುಗಳಿಗೆ ನಾವು ಅಂತ್ಯ ಹಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಕಿಂಚಿತ್ತೂ ಅವಕಾಶವಿಲ್ಲ. ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಿದ್ದೇವೆ. ಅಧಿಕಾರಿಗಳು ಅರ್ಥಮಾಡಿಕೊಂಡು ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ. ಪರಿಣಾಮ ಜನರಿಗೆ ನಾಗರೀಕ ಸವಲತ್ತು ಸಿಗುತ್ತಿಲ್ಲ. ಇದೊಂದು ಬಾರಿ ಬಿ ಖಾತಾ ಕೊಟ್ಟು ಅಂತ್ಯ ಹಾಡುತ್ತೇವೆ ಎಂದು ತಿಳಿಸಿದರು.
3 ತಿಂಗಳೊಳಗೆ ಎಲ್ಲರಿಗೂ ಖಾತೆ ನೀಡಿ, ಅನಿಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಿ. ಇಷ್ಟರೊಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಿ. ಅಧಿಕಾರಿಗಳು ರಾಜಿ ಮಾಡಿಕೊಂಡರೆ ಸಹಿಸಲ್ಲ. ಅನಧಿಕೃತ ಬಡಾವಣೆಗಳು ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರಾ ಯೋಜನಾ ಅಧಿಕಾರಿಗಳು ಜವಬ್ದಾರರಾಗುತ್ತೀರಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸೂಚಿಸಿದರು.
ನಾನು ಮತ್ತು ಸಂಬಂಧಪಟ್ಟ ಎಲ್ಲಾ ಸಚಿವರು ಈ ಕುರಿತು ಸ್ಪಷ್ಟಪಡಿಸಿದ್ದೇವೆ. ಹೊಸ ಗೊಂದಲಗಳಿಗೆ ಅವಕಾಶ ಮಾಡಿಕೊಡಬೇಡಿ. ಬಿ ಖಾತಾ ಇವತ್ತಿನಿಂದಲೇ ಕೊಡಲು ಶುರುಮಾಡಿ ಎಂದು ಸೂಚಿಸಿದರು.





