ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಬೆಳಯನ್ನು ನಾಶಮಾಡಿವೆ. ಚಿಕ್ಕಮಗಳೂರಿನಲ್ಲಿ ರೈತರ ಗೋಳನ್ನು ಯಾರು ಕೇಳುವವರೇ ಇಲ್ಲದಂತಾಗಿದೆ. ಹೇಗೋ ತಾನು ಬೆಳೆದ ಬೆಳೆಯನ್ನು ನಂಬಿ ಜೀವನ ಸಾಗಿಸುತ್ತಿರುವ ರೈತರಿಗೆ ಈಗ ಬರಸಿಡಿಲು ಬಡಿದಂತಾಗಿದೆ.
ಚಿಕ್ಕಮಗಳೂರಿನ ಅನೇಕ ಹಳ್ಳಿಗಳಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಅನ್ನದಾತ ಭಾರೀ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೈತರು ಬೆಳೆದ ಬಾಳೆ, ತೆಂಗು, ಅಡಿಕೆ, ಶುಂಠಿ ಸೇರಿದಂತೆ ಹಲವು ಬೆಳೆಗಳನ್ನು ಕಾಡಾನೆಗಳು ತುಳಿದು ತಿಂದು ಹಾಕಿವೆ. ಭಾರೀ ಮಳೆಯಾಗುತ್ತಿರುವ ಸಂದರ್ಭದಲ್ಲಿ ಅನ್ನದಾತ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾನೆ. ಆದರೆ ಕಾಡಾನೆಗಳು ದಾಂಧಲೆ ನಡೆಸಿ ಬೆಳೆ ನಾಶ ಮಾಡುತ್ತಿರುವುದು ರೈತರನ್ನು ಭಾರೀ ನಷ್ಟಕ್ಕೀಡುಮಾಡಿದೆ.
ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ರೂ ಏನೂ ಪ್ರಯೋಜನವಾಗ್ತಿಲ್ಲ. ವಿಷಯ ತಿಳಿದರೂ ಕೂಡ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಕಷ್ಟ ಆಲಿಸುತ್ತಿಲ್ಲ. ಅರಣ್ಯಾಧಿಕಾರಿಗಳ ನಡೆಯಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆದಷ್ಟು ಬೇಗ ಕಾಡಾನೆಗಳ ಹಾವಳಿಯನ್ನು ತಪ್ಪಿಸಬೇಕು. ಕಾಡಾನೆ ಬರದಂತೆ ತಡೆಗೋಡೆ ನಿರ್ಮಿಸಿ, ರೈತರ ಕಷ್ಟಗಳನ್ನು ಆಲಿಸಬೇಕು. ಇದು ಮುಂದುವರಿದರೆ ನಾವು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಮಾತು ಮಾತಿಗೂ ರೈತರ ಪರ ಎನ್ನುವ ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಜಾಣಕುರುಡರಂತೆ ಇರುವ ಅರಣ್ಯಾಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಾ? ಹಾಗೂ ಮುಂದಿನ ದಿನಗಳಲ್ಲಾದ್ರೂ ರೈತರ ಸಂಕಷ್ಟವನ್ನು ದೂರ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.