ಬೆಂಗಳೂರು: 2023ರ ಡಿಸೆಂಬರ್ 4ರಂದು ಹಾಸನದಲ್ಲಿ ಕಾಡಾನೆಯೊಂದಿಗಿನ ಕಾದಾಟದಲ್ಲಿ ದಸರಾ ಆನೆ ಅರ್ಜುನ ಮಡಿದಿತ್ತು. ದಸರಾ ಆನೆ ಮಡಿದ ಜಾಗದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಇದೇ ಜುಲೈನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಹಾಸನ ಜಿಲ್ಲೆಯ ಯಸಳೂರು ವಲಯದಲ್ಲಿ ಕಾಡಾನೆ ಸೆರೆಗೆ ತೆರಳಿದ್ದ ಅರ್ಜುನ ಅಂಡ್ ಟೀಂ ಕೂಂಬಿಂಗ್ ಕಾರ್ಯಾಚರಣೆ ವೇಳೆ ಅರ್ಜುನನನ್ನು ಕಳೆದುಕೊಂಡಿದತ್ತು.
ವಿಧಾಸೌಧದ ಮುಂಭಾಗ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸಫಾರಿ ವಿಶೇಷ ವಿನ್ಯಾಸದೊಂದಿಗೆ ನಿರ್ಮಾಣವಾಗಿರುವ ಮೂರು ಮಿನಿ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಾಸನ ಜಿಲ್ಲೆಯ ಯಸಳೂರಿನಲ್ಲಿ ಅರ್ಜುನ ಮಡಿದ ಸ್ಥಳದಲ್ಲಿ ಸಮಾಧಿ ಹಾಗೂ ಸ್ಮಾರಕ ಹಾಗೂ ಅರ್ಜುನ ವಾಸವಿದ್ದ ಬಳ್ಳೆ ಶಿಬಿರದಲ್ಲಿಯೂ ಅರ್ಜುನನ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಎರಡೂ ಸ್ಮಾರಕಗಳ ಬಳಿ ಅರ್ಜುನನ ಪ್ರತಿಕೃತಿ ನಿರ್ಮಿಸಲಾಗುವುದು. ಇದ ಜತೆಗೆ ಅರ್ಜುನ ಅಂಬಾರಿ ಹೊತ್ತ ಚಿತ್ರಗಳು, ವಿವಿಧ ಆನೆ, ಹುಲಿ ಕಾರ್ಯಾಚರಣೆ ವೇಳೆ ಸೆರೆಹಿಡಿದರುವ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅರ್ಜುನನ ಸಾಹಸ, ಕೊಡುಗೆ ಮತ್ತು ಸೇವೆಯನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು ಎಂದು ಅವರು ನೆನೆದರು.





