ಧಾರವಾಡ: ಸದ್ಯ ಲೋಕಸಭೆ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ಹಣ, ಹೆಂಡ ಸಾಗಾಣಿಕೆ ಬಗ್ಗೆ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಹಿನ್ನಲೆ ಮಂಗಳವಾರ ಧಾರವಾಡದ ಫ್ಲ್ಯಾಟ್ ಒಂದರಲ್ಲಿ ಸಂಗ್ರಹಿಸಲಾಗಿದ್ದ 18 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ನಗರದ ನಾರಾಯಣಪುರ ರಸ್ತೆಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿರುವ ಮನೆಯೊಂದರ ಮೇಲೆ ಅಕ್ರಮ ಮದ್ಯ ಸಂಗ್ರಹಿಸಿಟ್ಟಿದ್ದಾರೆ ಎಂದು ಚುನಾವಣಾ ಅಧಿಕಾರರಿಗಳಿಗೆ ಮಾಹಿತಿ ಬಿತ್ತು. ತಕ್ಷಣವೇ ಅಧಿಕಾರಿಗಳು ಬಸವರಾಜು ದುತ್ತನ್ನವಾರ್ ಎಂಬುವವರ ಮನೆಗೆ ಭೇಟಿ ಕೊಟ್ಟಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಮದ್ಯದ ಬಾಟಲಿ ಹುಡುಕಲು ಬಂದವರಿಗೆ ಕಂತೆ ಕಂತೆ 18 ಕೋಟಿ ರೂಪಾಯಿ ಹಣ ಸಿಕ್ಕಿದೆ. ಬಳಿಕ ಆಗಮಿಸಿದ ಐಟಿ ಅಧಿಕಾರಿಗಳು ಹಣವನ್ನು ಎಣಿಸಿ ಸಿಕ್ಕ 18 ಕೋಟಿ ಹಣವನ್ನು ಹುಬ್ಬಳಿಯ ಕೇಶ್ವಾಪುರದ ಎಸ್‌ಬಿಐ ಬ್ಯಾಂಕಿನ ಐಟಿ ಖಾತೆಗೆ ಜಮೆ ಮಾಡಿದ್ದಾರೆ.
ಧಾರವಾಡದ ಉದ್ಯಮಿ ಯು.ಬಿ ಶೆಟ್ಟಿಗೆ ಸೇರಿರುವ ಈ ಹಣವನ್ನು ಅಕೌಂಟೆಂಟ್ ಬಸವರಾಜು ಮನೆಯಲ್ಲಿ ಇಡಲಾಗಿತ್ತು. ಈ ಹಣದ ಬಗ್ಗೆ ಅಧಿಕಾರಿಗಳು ಯು.ಬಿ ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.