ಬೆಂಗಳೂರು: ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಲು ಸೂಚನೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೆಲ್ಲವನ್ನು ಎಐಸಿಸಿ, ಪಿಸಿಸಿಯವರು ನೋಡಿಕೊಳ್ಳುತ್ತಾರೆ. ಪಿಸಿಸಿ ಅಧ್ಯಕ್ಷರ ಬಳಿಯೂ ದಾಖಲೆಗಳನ್ನು ಕೊಡುವಂತೆ ಚುನಾವಣಾ ಆಯೋಗ ಕೇಳಿದೆ. ರಾಹುಲ್ ಗಾಂಧಿ ಪಿಸಿಸಿ ಅಧ್ಯಕ್ಷರಿಗೆ ಎಲ್ಲಾ ಜವಾಬ್ದಾರಿ ಕೊಟ್ಟಿದ್ದಾರೆ. ಹಾಗಾಗಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಕೂಡ ಮತ ಖರೀದಿ ಮಾಡಿ ಗೆದ್ದಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಆರೋಪಿಸಿರುವ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಆಯೋಗ ಬೇರೆಯವರ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇಬ್ರಾಹಿಂ ಈ ಹಿಂದೆ ನಮ್ಮ ಪಕ್ಷದಲ್ಲಿ ಇದ್ದರು. ಅವರು ಏನು ಬೇಕಾದರೂ ಹೇಳುತ್ತಾರೆ. ಜನಾಕರ್ಷಣೆ ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಅವರು ಜನಾಕರ್ಷಣೆಗಾಗಿ ಹೇಳಿಕೆ ಕೊಡುತ್ತಾರೆ ಎಂದು ಹೇಳಿದರು.





