ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯ ಅಧಿವೇಶನದಲ್ಲಿ ಮಂಡಿಸಲು ಪ್ರಯತ್ನಗಳು ನಡೆದಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‍ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕದಿಂದ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ ಹತ್ತು ಘೋಷಣೆಗಳನ್ನು ಮಾಡಲಾಯಿತು.
ಚಿತ್ರದುರ್ಗದ ಘೋಷಣೆಯ ಪ್ರಕಾರ ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದ ಬಳಿಕ ಮೊದಲ ಅವೇಶನದಲ್ಲೇ ಸದಾಶಿವ ಆಯೋಗದ ವರದಿಯನ್ನು ಮಂಡಿಸುವುದಾಗಿ ಭರವಸೆ ನೀಡಲಾಗಿತ್ತು. ಈಗ ನಾವು ಅಧಿಕಾರಕ್ಕೆ ಬಂದಿದ್ದೇವೆ. ಮೊದಲ ಅಧಿವೇಶನದಲ್ಲಿ ವರದಿ ಮಂಡಿಸಲಾಗಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ 2ನೇ ಅವೇಶನದಲ್ಲಿ ಮಂಡನೆ ಮಾಡಲು ಒತ್ತಡ ಹೇರುತ್ತಿದ್ದೇವೆ ಎಂದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತು ತಾವು ಮುಖ್ಯಮಂತ್ರಿಯರ ಜೊತೆ ಚರ್ಚೆ ನಡೆಸಿದ್ದು, ವರದಿ ಮಂಡನೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ. ಇತರ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ವರದಿ ಮಂಡನೆಯಾಗಬೇಕು, ಚರ್ಚೆಯಾಗಬೇಕು ಎಂಬುದು ಎಲ್ಲರ ಒತ್ತಾಸೆ. ಆದರೆ ಅದಕ್ಕೂ ಮುನ್ನ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿಯವರು, ಶಾಸಕರು, ಸಚಿವರು, ಮುಖಂಡರ ಜೊತೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು





