ಬೆಂಗಳೂರು : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜಾಮೀನಿನ ಮೇರೆಗೆ ಹೊರಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಸಂಬಂಧಿಸಿದಂತೆ ದೇಶದ ವಿವಿಧ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು ಹಾಗೂ ಕೆ.ಜಿಗಟ್ಟಲೆ ಚಿನ್ನ ವಶಕ್ಕೆ ಪಡೆದುಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ ಎ) ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ ಅಧಿಕಾರಿಗಳು ಕಳೆದ ಬುಧವಾರ ಹಾಗೂ ಗುರುವಾರ ಕಾರವಾರದಲ್ಲಿ ಶಾಸಕರ ನಿವಾಸ, ಗೋವಾ, ಮುಂಬೈ ಹಾಗೂ ದೆಹಲಿ ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಪರಿಶೀಲನೆ ವೇಳೆ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲಾತಿಗಳು ದೊರೆತಿವೆ. ಇದಕ್ಕೆ ಪೂರಕವಾಗಿ ಇಮೇಲ್ ಮಾಡಿರುವುದು ಗೊತ್ತಾಗಿದೆ. ತಪಾಸಣೆ ವೇಳೆ 1.68 ಕೋಟಿ ನಗದು, 6.75 ಕೆ.ಜಿ ಮೌಲ್ಯದ ಚಿನ್ನದ ಬಿಸ್ಕತ್ಗಳು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 14.13 ಕೋಟಿ ರೂ. ಹಣವನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ನಿವಾಸಿಯಾಗಿರುವ ಸತೀಶ್ ಮನೆಯಲ್ಲಿ ಅಧಿಕಾರಿಗಳು ಸತತ 22 ಗಂಟೆಗಳ ಕಾಲ ಶೋಧ ಕಾರ್ಯ ಕೈಗೊಂಡಿದ್ದರು. ದಾಳಿ ವೇಳೆ ಸತೀಶ್ ಮನೆಯಲ್ಲಿ ಇರಲಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಅವರ ಅಂಗರಕ್ಷಕರನ್ನು ಸಂಪರ್ಕಿಸಿದರೂ ಶಾಸಕರ ಸುಳಿವು ಬಗ್ಗೆ ಪತ್ತೆಯಾಗಿರಲಿಲ್ಲ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿತ್ತು. ಈ ಸಂಬಂಧ ಹೈಕೋರ್ಟ್, ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಿರುವ ಸತೀಶ್ ಅವರ ಮೇಲೆ ಸಿಬಿಐ ಹಾಗೂ ಲೋಕಾಯುಕ್ತ ತನಿಖೆಯ ವಿಚಾರಣೆ ಎದುರಿಸುತ್ತಿದ್ದಾರೆ.





