ಬೆಂಗಳೂರು: ಕರಾವಳಿ ಹಾಗೂ ಕರಾವಳಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿದ್ದರೆ, ಒಳನಾಡಿನ ಒಂಭತ್ತು ಜಿಲ್ಲೆಗಳ 74 ತಾಲ್ಲೂಕುಗಳ 338 ಹೋಬಳಿಗಳಲ್ಲಿ ಮಳೆ ಕೊರತೆಯಾಗಿ ಅನಾವೃಷ್ಟಿಯಾಗಿದೆ.
ಜೂನ್-ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು, ಬರದ ಛಾಯೆ ಆವರಿಸುವ ಆತಂಕ ರೈತ ಸಮುದಾಯದಲ್ಲಿ ಎದುರಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್.1ರಿಂದ ಇಲ್ಲಿಯ ತನಕ ರಾಜ್ಯದಲ್ಲಿ 463 ಮಿ.ಮೀನಷ್ಟು ವಾಡಿಕೆ ಪ್ರಮಾಣದ ಮಳೆಯಾಗಿದೆ.
ಕರಾವಳಿಯಲ್ಲಿ ಶೇ.8ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಶೇ.2, ಉತ್ತರ ಒಳನಾಡಿನಲ್ಲಿ ಶೇ.4 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.19ರಷ್ಟು ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ.
ರಾಜ್ಯದ 22 ಜಿಲ್ಲೆಗಳ 162 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದರಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ತೀವ್ರವಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಬಳ್ಳಾರಿ, ಬೀದರ್, ರಾಯಚೂರು, ಮೈಸೂರು, ಬೆಂಗಳೂರು ದಕ್ಷಿಣ ಜಿಲ್ಲೆಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ.





