ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ಎಚ್ಎಂಪಿವಿ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಎಚ್‌ಎಂಪಿವಿ ಅಪಾಯಕಾರಿ ಅಲ್ಲ. ಯಾವುದೇ ಆತಂಕ ಬೇಡ. ಆದರೆ ಎಲ್ಲರೂ ಮುಂಜಾಗ್ರತೆ ವಹಿಸೋದು ಅಗತ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋ಼ಷ್ಠಿ ನಡೆಸಿ ಮಾತನಾಡಿದ ಅವರು, ಎಚ್‌ಎಂಪಿವಿ ವೈರಸ್ ಬಗ್ಗೆ ಆತಂಕಪಡುವ ಆಗತ್ಯವಿಲ್ಲ. ಭಾರತದಲ್ಲಿ ಇದು ಹೊಸದೇನಲ್ಲ. ಬಹಳಷ್ಟು ವರ್ಷಗಳಿಂದ ಎಚ್‌ಎಂಪಿವಿ ವೈರಸ್ ವಿಶ್ವದಾದ್ಯಂತ ಇದೆ. ಈ ವೈರಸ್‌ನಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು.
ದೇಶದಲ್ಲಿ ಎಚ್‌ಎಂಪಿವಿ ವೈರಸ್ ರೀತಿ ನೂರಾರು ರೀತಿಯ ವೈರಸ್‌ಗಳಿವೆ. ಯಾರು ಇದರ ಬಗ್ಗೆ ಭಯ ಪಡುವ ಆಗತ್ಯವಿಲ್ಲ. ಕಳೆದ 2001ರಲ್ಲಿ ಮೊದಲ ಬಾರಿಗೆ ಈ ವೈರಸನ್ನು ಪತ್ತೆ ಹಚ್ಚಲಾಗಿದೆ. ಈ ವೈರಸ್‌ನಿಂದ ಜನರು ಆತಂಕದಲ್ಲಿದ್ದಾರೆ. ಚಳಿಗಾಲದಲ್ಲಿ ಸಹಜವಾಗಿ ಕೆಮ್ಮು, ಕಫ ಇದ್ದೇ ಇರುತ್ತದೆ. ಆದರೆ ಇಂತಹ ಲಕ್ಷಣಗಳು ಎಚ್‌ಎಂಪಿವಿ ಪ್ರಕರಣವಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ನೆರೆಯ ದೇಶ ಚೀನಾದಲ್ಲಿನ ಈ ವೈರಸ್ ಹರಡುವಿಕೆ ಕುರಿತಾದ ಮಾಹಿತಿಯ ಬಗ್ಗೆ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕು. ಈಗಾಗಲೇ ದೇಶದಲ್ಲಿ ಗುಜರಾತ್, ಪುದುಚೇರಿಯಲ್ಲಿ ಎಚ್‌ಎಂಪಿವಿ ವೈರಸ್ ಪ್ರಕರಣ ದಾಖಲಾಗಿವೆ. ಇದರಿಂದ ಮಕ್ಕಳು ಭಯ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಲಾಕ್‌ಡೌನ್ ಹಾಗೂ ಮಾಸ್ಕ್ ಸೇರಿದಂತೆ ಯಾವುದು ಇಲ್ಲ. ಯಾರೂ ಕೂಡ ಭಯಪಡಬೇಡಿ ಎಂದು ಹೇಳಿದರು.





