Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

ಕೋವಿಡ್‌ ರೂಪಾಂತರದ ಬಗ್ಗೆ ಆತಂಕ ಬೇಡ : ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್‌ ರೂಪಾಂತರಿ JN.1 ಸೋಂಕು ಕಾಣಿಸಿಕೊಂಡಿದ್ದರೂ ಜನ ಆತಂಕಕ್ಕೆ ಒಳಗಾಗದೇ, ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ನೀಡಿದರು.

ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು.

ರೂಪಾಂತರಿ ಜೆಎನ್.1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಹೇಳಿದ್ದಾರೆ.

ಆದರೂ ಇದರ ಬಗ್ಗೆ ಮೈ ಮರೆಯದೇ, ಕೆಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್  ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

60 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್‌ ಪಡೆಯಿರಿ:
ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಕೋವಿಡ್‌ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಯಾವ ಲಸಿಕೆಯನ್ನು (ಕೋವ್ಯಾಕ್ಸಿನ್‌ ಅಥವಾ ಕೋವಿಶೀಲ್ಡ್) ನೀಡಲಾಗಿತ್ತೋ ಅದೇ ಲಸಿಕೆ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!