ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಈ ಬಗ್ಗೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲ ವೃಂದ ಸಂಘಗಳು ಮುಷ್ಕರ ಕೈಗೊಳ್ಳುವ ಬಗ್ಗೆ ತೀರ್ಮಾನಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ರಾಜ್ಯ ವ್ಯಾಪಿ ಒಪಿಡಿ ಸೇವೆ ಬಂದ್ ಮಾಡಿ ಮುಷ್ಕರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಮಾರ್ಚ್ 11 ರಿಂದ ಮುಷ್ಕರ ಆರಂಭಿಸಲಿದೆ. ಮಾರ್ಚ್ 11ರಿಂದ 15ರವರೆಗೆ ಎಲ್ಲಾ ಜಿಲ್ಲಾ ಆಸ್ಪತ್ರೆ ತಾಲೂಕಾಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಈ ವೇಳೆ ಹೊರರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ತುರ್ತು ಸೇವೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಆನಂತರವೂ ಸರ್ಕಾರ ತಮ್ಮ ನಿಲುವಿನಲ್ಲಿ ಬದಲಾವಣೆ ಕಾಣದಿದ್ದರೆ ಮಾ.16ರಿಂದ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಸಂಘದ ಪದಾಧಿಕಾರಿಗಳು ಮಹತ್ವದ ಘೋಷಣೆ ಮಾಡಿದರು. ಆರೋಗ್ಯ ಇಲಾಖೆ ನೌಕರರೂ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ಬೆಂಬಲ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದರು.
ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ ಎಂ. ಮೇಟಿ ಹಾಗೂ ಆರೋಗ್ಯ ಇಲಾಖೆ ಕೇಂದ್ರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ ಅವರುಗಳು ಜಂಟಿ ಪತ್ರಿಕಾಗೋಷ್ಟಿ ನಡೆಸಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಂಬಡ್ತಿ, ಕರ್ತವ್ಯದ ಬಳಿಕ ಖಾಸಗಿ ವ್ಯವಸ್ಥೆಯಡಿ ಚಿಕಿತ್ಸೆಗೆ ಅವಕಾಶ ಸೇರಿ 14 ಬೇಡಿಕೆಗಳನ್ನು ಮಾರ್ಚ್ 111 ರೊಳಗೆ ಈಡೇರಿಸುವಂತೆ ಸರ್ಕಾರಿ ವೈದ್ಯಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಪ್ರಮುಖ ಬೇಡಿಕೆಗಳು..
- 4 ವರ್ಷಗಳಿಂದ ವಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಇಲ್ಲ.
- 13 ವರ್ಷಗಳಿಂದ ಜೇಷ್ಠತಾ ಪಟ್ಟಿ ಪರಿಷ್ಕರಣೆ ಆಗಿಲ್ಲ.
- ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೇಮಕಗೊಂಡ ವೈದ್ಯರಿಗೆ ವೇತನ/ಶುಲ್ಕ ಭತ್ಯೆ ಸಿಗುತ್ತಿಲ್ಲ.
- ವರ್ಷಪೂರ್ತಿ ವರ್ಗಾವಣೆ ಕಾಯ್ದೆ ತಿದ್ದುಪಡಿ ಮನವಿ ನಿರ್ಲಕ್ಷ್ಯ.
- ವಿಶೇಷ ಭತ್ಯೆ ಪರಿಷ್ಕರಣೆ ಮಾಡಿಲ್ಲ..
- ಸರ್ಕಾರಿ ವೈದ್ಯರಿಗೆ ಖಾಸಗಿ ಐಪಿಡಿ ಸೇವೆಗೆ ನಿರ್ಬಂಧ
- ಆಸ್ಪತ್ರೆಗಳಲ್ಲಿ ಕಾಲಕಾಲಕ್ಕೆ ಔಷಧಗಳ ಕೊರತೆ.
- ಖಾಲಿ ಹುದ್ದೆಗಳ ಭರ್ತಿ ಮಾಡದೆ ಇರುವುದರಿಂದ ವೈದ್ಯರ ಮೇಲೆ ಹೆಚ್ಚಿದ ಒತ್ತಡ..





