ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣ ಹಾಗೂ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಮೇ.13) ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡ ಶಾಸಕ ಎಚ್.ಡಿ ರೇವಣ್ಣ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಚ್‌ಡಿ ರೇವಣ್ಣ ಅವರಿಗೆ ಜಾಮೀನು ದೊರೆತಿರುವುದರಿಂದ ನನಗೆ ಖುಷಿಯಾಗಿಲ್ಲ. ಇದು ಸಂತಸ ಪಡುವ ಸಮಯವಲ್ಲ. ನಾನು ಸಂತೋಷಪಡುತ್ತೇನೆ ಎಂದು ಭಾವಿಸಬೇಡಿ ಇದೊಂದು ರಾಜ್ಯವೇ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಾನು ರೇವಣ್ಣ ಕುಟುಂಬ ಮುಗಿಸಲು ಪ್ಲಾನ್ ಮಾಡುತ್ತಿದ್ದೇನೆ ಎಂದು ಹಲವರು ಹೇಳುತ್ತಿದ್ದಾರೆ. ನಾನು ಯಾವಾಗಲೂ ಸತ್ಯದ ಕಡೆ ಇರುತ್ತೇನೆ. ಮಹಿಳಾ ಸಂತ್ರಸ್ತೆಯರ ಪರವಾಗಿ ನಾನು ಹೋರಾಟ ಮಾಡುತ್ತೇನೆ. ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪೆನ್‌ಡ್ರೈವ್ ಪ್ರಕರಣ ದೊಡ್ಡ ಮಟ್ಟದಲ್ಲಿ ನಡೆದಿದ್ದು, ಇನ್ನೂ ಸಮಯಾವಕಾಶ ಇದೆ ನಾನು ದುಡುಕಲ್ಲ ಎಂದು ಎಚ್‌ಡಿಕೆ ಎಚ್ಚರಿಸಿದ್ದಾರೆ.
ಎಸ್‌ಐಟಿ ವರದಿ ಮಾಹಿತಿ ಸೋರಿಕೆ ಸಂಬಂಧ, ಪೆನ್‌ಡ್ರೈವ್ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ಭಾಗವಾಗಿ ದೊಡ್ಡ ತಿಮಿಂಗಲದ ಪಾತ್ರವಿದೆ. ಅದನ್ನು ಹಿಡಿದರೆ ಎಲ್ಲಾ ಪ್ರಕರಣ ಹೊರಗೆ ಬರಲಿದೆ ಎಂದು ಹೇಳಿದರು.
ಎಸ್‌ಐಟಿ ಅಧಿಕಾರಿಗಳ ಮೇಲೂ ಸಿಟ್ಟಾಗಿರುವ ಎಚ್‌ಡಿಕೆ, ನಿಮಗೂ ತಂದೆ ತಾಯಿ, ಸಹೋದರರಿದ್ದಾರೆ. ಈವರೆಗೆ ನೀವು ಪೆನ್‌ಡ್ರೈವ್ ಹಂಚಿದವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದರು.





