ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ನೆನ್ನೆ ವಯೋಸಹಜ ಕಾರಣದಿಂದ ಕೊನೆಯುಸಿರೆಳೆದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದೆ ಲೀಲಾವತಿ ಅವರ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಲೀಲಾವತಿ ಅವರು ಕಟ್ಟಿಸಿದ ಪಶುವೈದ್ಯಕೀಯ ಆಸ್ಪತ್ರೆಯನ್ನು ನಾನು ಉದ್ಘಾಟಿಸಿದ್ದು ನನ್ನ ಮನಸ್ಸಿಗೆ ನೆಮ್ಮದಿ ಕೊಟ್ಟ ಕೆಲಸ. ಕೊನೆಯ ಬಾರಿಗೆ ಲೀಲಾವತಿಯವರು ನನ್ನ ಮನೆಗೆ ಬಂದು ಆಸ್ಪತ್ರೆ ಉದ್ಘಾಟನೆಯ ಆಹ್ವಾನ ಪತ್ರಿಕೆ ನೀಡಿದ್ದರು. ಆಗ ಎಲ್ಲರನ್ನೂ ಗುರುತು ಹಿಡಿಯುತ್ತಿದ್ದರು. ಆಗ ಅವರಿಗೆ ಸ್ವಲ್ಪ ಪ್ರಜ್ಞೆ ಇತ್ತು ನೀವು ಬಂದು ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟನೆ ಮಾಡಬೇಕು ಎನ್ನುವುದು ನನ್ನ ಜೀವನದ ಕೊನೆಯ ಆಸೆ. ನೀವು ಉದ್ಘಾಟನೆಗೆ ಬರಲೇ ಬೇಕು ಎಂದು ಮನವಿ ಮಾಡಿದ್ದರು. ಕೆಲಸದ ಒತ್ತಡದ ನಡುವೆಯೂ ಆಸ್ಪತ್ರೆ ಉದ್ಘಾಟನೆ ಮಾಡಿದ್ದೆ. ಯಾರು ಕೇಳದೇ ಇದ್ದರೂ ತಾನಾಗಿಯೇ ಆಸ್ಪತ್ರೆ ಕಟ್ಟಿಸಿದ್ದರು. ಇದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
ದುಡ್ಡಿರುವ ಮನುಷ್ಯ ದಾನ ಧರ್ಮ ಮಾಡಬಹುದು. ಆದರೆ ಆರ್ಥಿಕವಾಗಿ ಶಕ್ತಿ ಇಲ್ಲದವರು ಸಮಾಜಕ್ಕೆ ಹಾಗೂ ಮೂಕ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ಆಸ್ಪತ್ರೆ ನಿರ್ಮಿಸಿರುವುದು ದೊಡ್ಡ ವಿಷಯ. ಇದು ಸಮಾಜಕ್ಕೆ ದೊಡ್ಡ ಸಂದೇಶ ಎಂದು ಹೊಗಳಿದ್ದಾರೆ.
ಮನುಷ್ಯ ಹುಟ್ಟಿದ ಮೇಲೆ ಸಾಯಲೇ ಬೇಕು. ಹುಟ್ಟು ಸಾವಿನ ನಡುವೆ ಸಾಧನೆ ಮಾಡಬೇಕು. ಲೀಲಾವತಿಯವರ ಸಾಧನೆ ಹಾಗೂ ಸಾರ್ಥಕ ಜೀವನ ನಮಗೆಲ್ಲರಿಗೂ ಆದರ್ಶ. ಲೀಲಾವತಿ ಅಮ್ಮನವರನ್ನು ಎಲ್ಲಾ ತರಹದ ಗೌರವ ನೀಡಿ ಕಳುಹಿಸಿಕೊಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಹೇಳಿದರು.